ಹನೂರು: ಕಾಲುವೆಗಳಲ್ಲಿ ತುಂಬಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ರೈತರಿಗೆ ಸಕಾಲದಲ್ಲಿ ನೀರಿನ ಸೌಕರ್ಯ ಒದಗಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯ ಮೂಲಕ ಗುಂಡಾಪುರ, ಬಸಪ್ಪನದೊಡ್ಡಿ, ಗಂಗನದೊಡ್ಡಿ ಹಾಗೂ ಇ ತರೆ ಗ್ರಾಮಗಳಲ್ಲಿ ಹಾದು ಹೋಗಿರುವ ಕಾಲುವೆಗಳನ್ನು ಶನಿವಾರ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಉಡುತೊರೆ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ, ಕಾಲುವೆಗಳಲ್ಲಿ ಹೂಳು, ಗಿಡ ಗಂಟಿಗಳು ಬೆಳೆದಿರುವುದರಿಂದ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಕೆಲವೆಡೆ ಕಾಲುವೆಗಳು ಮುಚ್ಚಿಹೋಗಿವೆ ಎಂದು ರೈತರು ದೂರಿದ್ದಾರೆ. ಆದ್ದರಿಂದ, ನೀರು ಸರಾಗವಾಗಿ ಹರಿಯಲು ಕೂಡಲೇ ಅಗತ್ಯ ಕ್ರಮವಹಿಸಬೇಕು. ಜತೆಗೆ ದುರಸ್ತಿಗೊಂಡಿರುವ ಗೇಟ್‌ವಾಲ್‌ಗಳನ್ನು ಸರಿಪಡಿಸಿ ನೀರು ಪೋಲಾಗುವುದನ್ನು ತಡೆಗಟ್ಟಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು ಎಂದು ಹೇಳಿದರು.
ಮಳೆಗಾಲದಲ್ಲಿ ಕಾತಾಳಿ ಬಸವೇಶ್ವರ ದೇಗುಲ ಸಮೀಪದ ಕೆರೆ ಭರ್ತಿಯಾಗಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುತ್ತದೆ. ಇದರಿಂದ ಹಲವು ಬಾರಿ ಬೆಳೆ ಹಾನಿಯಾಗಿ ನಷ್ಟ ಅನುಭವಿಸುವಂತಾಗಿದೆ. ಕೆರೆ ನೀರು ಪೋಲಾಗುವ ಬದಲು ಕಾಲುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಫಸಲು ನಷ್ಟವಾಗಲಿದೆ. ಆದ್ದರಿಂದ, ಈ ಬಗ್ಗೆ ಗಮನಹರಿಸುವಂತೆ ರೈತರಾದ ಸುಬ್ರಹ್ಮಣ್ಯ, ಕಾವ್ಯಾ ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು , ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಪರಿಶೀಲನೆ ನಡೆಸಿ ಕಾಲುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ನೀಲಿನಕ್ಷೆ ಹಾಗೂ ಕ್ರಿಯಾಯೋಜನೆ ತಯಾರಿಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಸ್ಥಳದಲ್ಲಿದ್ದ ಎಇಇ ಮಂಜುನಾಥ್ ಅವರಿಗೆ ಸೂಚಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಮುಖಂಡರಾದ ವಿಜಯಕುಮಾರ್, ಹೊನ್ನೇಗೌಡ, ಜಡೇಸ್ವಾಮಿ, ಗೋಪಾಲನಾಯ್ಕ ಇತರರು ಇದ್ದರು.