ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೂಲಿಗೆ ಬಣ್ಣ ಹಾಕುತ್ತಿದ್ದು, ಅದರ ಕಲುಷಿತ ಬಣ್ಣಮಿಶ್ರಿತ ನೀರನ್ನು ಕೆರೆಗಳು, ಕಾಲುವೆಗೆ ಹರಿಸುತ್ತಿರುವ ಫ್ಯಾಕ್ಟರಿ ಮಾಲೀಕರಿಗೆ ನಗರಸಭೆಯಿಂದ ನೋಟಿಸ್ ನೀಡಲಾಗಿದೆ.
ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ನೆಚ್ಚಿಕೊಂಡು ಸಾವಿರಾರು ಕುಟುಂಬಗಳಿವೆ. ಆದರೆ, ಕೆಲವೆಡೆ ಅನಧಿಕೃತವಾಗಿ ನೂಲಿಗೆ ಬಣ್ಣ ಹಾಕಲಾಗುತ್ತಿದ್ದು, ಅದರ ತ್ಯಾಜ್ಯವನ್ನು ನಗರದ ಅರಳುಮಲ್ಲಿಗೆ ವೃತ್ತ, ತೇರಿನ ಬೀದಿಯ ಸಮೀಪದಲ್ಲಿನ ಕೆರೆಗಳಿಗೆ, ಹರಿಯುವ ಕಾಲುವೆಗಳಿಗೆ ಬಿಡಲಾಗುತ್ತಿದೆ. ಅದರ ಬಗ್ಗೆ ತನಿಖೆ ನಡೆಸಿ, ಕ್ರಮವಹಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಕಾವತಿ ನದಿ ಹೋರಾಟ ಸಮಿತಿಯಿಂದ ದೂರು ಸಲ್ಲಿಸಲಾಗಿತ್ತು.
ದೂರಿನನ್ವಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅನಧಿಕೃತವಾಗಿ ನೂಲಿಗೆ ಬಣ್ಣ ಹಾಕುತ್ತಿದ್ದು, ಅದರಿಂದ ಬರುವ ರೊಚ್ಚು ನೀರನ್ನು ಅನಧಿಕೃತವಾಗಿ ಜಲಮೂಲಗಳಿಗೆ ಬಿಡುವುದು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸುವಂತೆ ಕ್ರಮವಹಿಸಬೇಕು. ಅನಧಿಕೃತವಾಗಿ ನೂಲಿಗೆ ಬಣ್ಣ ಹಾಕುವವರ ಮೇಲೆ ಕಾನೂನು ರೀತಿ ಕ್ರಮವಹಿಸಬೇಕು. ಪತ್ರ ತಲುಪಿದ 7 ದಿನದೊಳಗೆ ದೂರಿನ ಬಗ್ಗೆ ಅಗತ್ಯ ಕ್ರಮವಹಿಸಿ ಮಾಹಿತಿ ನೀಡಲು ನಗರಸಭೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿತ್ತು.
ಕಾನೂನು ಉಲ್ಲಂಘನೆ: ಅನಧಿಕೃತವಾಗಿ ರೇಷ್ಮೆ ನೂಲಿಗೆ ಬಣ್ಣ ಹಾಕುತ್ತಿದ್ದ ಅಂಗಡಿಗಳ ಮಾಲೀಕರಿಗೆ ನಗರಸಭೆ ನೋಟಿಸ್ ನೀಡಿದೆ. ಇದಕ್ಕಾಗಿ ನಿಮ್ಮ ಉದ್ಯಮವನ್ನು ಏಕೆ ಮುಚ್ಚಬಾರದು ಎಂದು ಲಿಖಿತವಾಗಿ ಕಚೇರಿಗೆ 7 ದಿನದೊಳಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟವರಿಗೆ ತಿಳಿಸಿದೆ. ಸೂಕ್ತ ಪ್ರತಿಕ್ರಿಯೆ ನೀಡದಿದ್ದಲಿ ಪುರಸಭೆ ಕಾಯ್ದೆ ಪ್ರಕರಣ 27ರ ಅನ್ವಯ ರೇಷ್ಮೆ ನೂಲಿಗೆ ಬಣ್ಣ ಹಾಕುವ ಉದ್ಯಮ ಮುಚ್ಚಲು ಸೂಕ್ತ ಕ್ರಮವಹಿಸಲಾಗುತ್ತಿದೆ ಎಂದು ನಗರಸಭೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅನಧಿಕೃತವಾಗಿ ನೂಲಿಗೆ ಬಣ್ಣ ಹಾಕುವ ಮೂಲಕ ಅದರಿಂದ ಹೊರಬರುವ ಕಲುಷಿತ ನೀರನ್ನು ಕೆರೆ, ಕಾಲುವೆಗೆ ಹರಿಸುತ್ತಿರುವವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ನೋಟಿಸ್ ನೀಡಲಾಗಿದ್ದು, ಅಗತ್ಯ ಕ್ರಮವಹಿಸಲಾಗುತ್ತದೆ. ಕಾರ್ತಿಕ್ ಈಶ್ವರ್, ಪೌರಾಯುಕ್ತ, ದೊಡ್ಡಬಳ್ಳಾಪುರ ನಗರಸಭೆ