ಆಲೂರು : ಎತ್ತಿನಹೊಳೆ ಯೋಜನೆ ಕಾಮಗಾರಿಯಿಂದ ದೊಡ್ಡ-ದೊಡ್ಡ ಬಂಡೆಗಳನ್ನು ಹೊರ ತೆಗೆಯಲು ಸಿಡಿಮದ್ದು ಸಿಡಿಸುತ್ತಿರುವುದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿರುವುದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜುನಾಥ್ ಒತ್ತಾಯಿಸಿದರು.
ತಾಲೂಕಿನ ಪಾಳ್ಯ ಹೋಬಳಿ ವ್ಯಾಪ್ತಿಗೆ ಒಳಪಡುವ ಕಾಮತಿ ಕೂಡಿಗೆ,ಲಕ್ಷ್ಮೀಪುರ,ಕಲ್ಕೆರೆ, ವೆಂಕಟೇಶಪುರ ಗ್ರಾಮಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ಹಾನಿಗಿಡಾಗಿ ಬಿರುಕು ಬಿಟ್ಟ ವಾಸದ ಮನೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು. ಚಿಕ್ಕಬಳ್ಳಾಪುರ,ತುಮಕೂರು,ಬೆಂಗಳೂರು ಗ್ರಾಮಂತರ ಸೇರಿದಂತೆ ಇತರೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಆಲೂರು ತಾಲೂಕಿನ ಪಾಳ್ಯ ಹೋಬಳಿ ಜಿ.ಜಿ.ಕೊಪ್ಪಲು,ಕಾಮತಿ ಕೂಡಿಗೆ, ಲಕ್ಷ್ಮೀಪುರ, ಕಲ್ಕೆರೆ, ಸೇರಿದಂತೆ ಇತರ ಗ್ರಾಮಗಳಲ್ಲಿನ ರೈತರ ಜಮೀನುಗಳ ಮೂಲಕ ಕಾಲುವೆ ಹಾದು ಹೋಗಿದೆ ಈ ಕಾಲುವೆ ತಗೆಯುವ ಸಲುವಾಗಿ ದೊಡ್ಡ-ದೊಡ್ಡ ಕಲ್ಲು ಬಂಡೆಗಳನ್ನು ಭೂಮಿಯಿಂದ ತೆಗೆಯಲು ಸಿಡಿಮದ್ದಗಳನ್ನು ಸಿಡಿಸಲಾಗುತ್ತಿದೆ ಇದರಿಂದ ಸುಮಾರು ಎರಡ್ಮೂರು ಕಿ.ಲೋ.ಮೀಟರ್ ರವರೆಗೂ ಭೂಮಿ ಅದುರುತ್ತಿದೆ ಅ ಸಂದರ್ಭದಲ್ಲಿ ವಾಸದ ಮನೆಗಳ ಗೋಡೆ ಸಂಪೂರ್ಣವಾಗಿ ಬಿರುಕು ಬಿಡುತ್ತಿವೆ.
ಸಿಡಿಮದ್ದಿನ ಸ್ಪೋಟಕದ ಶಬ್ದ ಮಾಲಿನ್ಯಕ್ಕೆ ಮಕ್ಕಳು, ವಯೋವೃದ್ಧರು ವಿಪರೀತ ಭಯ ಭೀತರಾಗಿ ಮನೆಯಿಂದ ಹೊರ ಬರಲು ಸಾದ್ಯವಾಗಿತ್ತಿಲ್ಲ. ಅಲ್ಲದೆ ಯೋಜನೆಯವರು ಜಮೀನು ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಹಾರ ನೀಡದೇ ಬೇಕಾಬಿಟ್ಟಿ ರೀತಿಯಲ್ಲಿ ಪರಿಹಾರ ನೀಡಿ ತಾರತಮ್ಯವೆಸಗಿದ್ದಾರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಜೊತೆಗೆ ತೊಂದರೆಗೀಡಾಗಿರುವ ಗ್ರಾಮಗಳನ್ನು ತಕ್ಷಣ ಪರಿಹಾರ ನೀಡುವುದರ ಜೊತೆಗೆ ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಬೇಕು ಇಲ್ಲದಿದ್ದರೆ ಈ ಭಾಗದ ಜನರೊಂದಿಗೆ ಸೇರಿ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಲಕ್ಷ್ಮೀಪುರ ಗ್ರಾಮದ ಮುಖಂಡ ಸೋಮಶೇಖರ್ ಮಾತನಾಡಿ, ಈ ಭಾಗದಲ್ಲಿ ಅಳವಾಗಿ ಕಾಲುವೆ ತೋಡುವ ಸಲುವಾಗಿ ದೊಡ್ಡ ದೊಡ್ಡ ಬಂಡೆಗಳನ್ನು ಹೊರತಗೆಯಲು ಸಿಡಿಮದ್ದು ಸಿಡಿಸುತ್ತಿದ್ದು ಇದರಿಂದ ನಮ್ಮ ಗ್ರಾಮಗಳಿಗೆ ಹಾನಿಯಾಗುತ್ತಿದೆ ಹಲವು ಬಾರಿ ಪ್ರತಿಭಟನೆ ಮಾಡಿದರು ಏನು ಪ್ರಯೋಜನ ವಾಗಿಲ್ಲ ಶಾಸಕರು ಇತ್ತ ಗಮನಹರಿಸುತ್ತಿಲ್ಲ ಇಲಾಖೆ ಅಧಿಕಾರಿಗಳಿಗೆ ನಮ್ಮ ಕೇಳುತ್ತಿಲ್ಲ ವಿಷದ ಬಾಟಲ್ ಹಿಡಿದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಿದ್ದರೂ ಸಹ ಕ್ಯಾರೆ ಎನ್ನುತ್ತಿಲ್ಲ ಬಿಜೆಪಿ ಮುಖಂಡ ಸಿಮೆಂಟ್ ಮಂಜಣ್ಣ ನಮ್ಮ ನೆರವಿಗೆ ದಾವಿಸಬೇಕು ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಿಪುರ ಗ್ರಾಮದ ಸೋಮಶೇಖರ್, ಪ್ರವೀಣ್, ಕಾಮತಿ ಕೂಡಿಗೆ ಹೇಮಂತ್ ಕುಮಾರ್, ಪರಮೇಶ್,ಕಲ್ಕೆರೆ ಗ್ರಾಮದ ಹರೀಶ್, ಶಂಕರ್,ವೆಂಕಟೇಶಪುರ ಗ್ರಾಮದ ವಿಜಯಕುಮಾರ್, ವೆಂಕಟೇಶ್, ಹಾಗೂ ಇತರರು ಹಾಜರಿದ್ದರು.