ಕೊಡೇಕಲ್: ಬಪ್ಪರಗಿ ಗ್ರಾಮದ ಕೃಷ್ಣಾ ಎಡದಂಡೆ ಮುಖ್ಯ ಕಾಲುವೆ ತಿರುವು ಅಪಾಯಕಾರಿಯಾಗಿದ್ದು, ಕಾಲುವೆ ಸೇತುವೆ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಿ ಈ ಅಪಾಯ ತಡೆಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ಸಾಗುವ ಮಾರ್ಗಮಧ್ಯೆ ಇರುವ ಈ ಮುಖ್ಯ ಕಾಲುವೆಯ ಸೇತುವೆಯೇ ಗ್ರಾಮಕ್ಕೆ ಪ್ರವೇಶಿಸಬೇಕು. ಆದರೆ ತಿರುವಿನಿಂದ ಕೂಡಿರುವ ಈ ರಸ್ತೆ ಎದುರಲ್ಲೇ ಮುಖ್ಯ ಕಾಲುವೆ ಅಪಾಯಕ್ಕೆ ಆಹ್ವಾನಿಸುವಂತಿದೆ. ಹೀಗಾಗಿ ನಿತ್ಯ ಕೆಲಸ ಕರ‍್ಯಗಳ ನಿಮಿತ್ತ ಗ್ರಾಮಸ್ಥರು ಇದೇ ರಸ್ತೆ ಅವಲಂಬಿಸಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಸಬೇಕಾದರೆ ತೀವ್ರ ಎಚ್ಚರದಿಂದ ವಾಹನ ಓಡಿಸಬೇಕಾಗಿದೆ. ಸ್ವಲ್ಪ ಯಾಮಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಗ್ರಾಮಸ್ಥರ ಅನುಕೂಲಕ್ಕಾಗಿ ಸೇತುವೆ ಪಕ್ಕ ತಡೆಗೋಡೆ ನಿರ್ಮಿಸಬೇಕು ಎಂದು ಶಂಕರಗೌಡ ಪೊಲೀಸ್ ಪಾಟೀಲ್ ಒತ್ತಾಯಿಸಿದ್ದಾರೆ.
ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ನಿಗಮದ ಅಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ ಕಾಲವೆ ಬಳಿ ತಡೆಗೋಡೆ ನಿರ್ಮಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.