filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36; 
ಜಿಲ್ಲೆ

ಕಾಲುವೆ ನೀರು ಭತ್ತ ಗದ್ದೆಗೆ ನುಗ್ಗಿ ಅವಾಂತರ

ಕೊಳ್ಳೇಗಾಲ: ಪಟ್ಟಣದ ಟಿ.ಸಿ.ಹುಂಡಿಯ ಹೊರ ವಲಯದಲ್ಲಿರುವ ಕಾಲುವೆಗಳ ನೀರು ಭತ್ತ ನಾಟಿ ಮಾಡಿದ್ದ 50ಕ್ಕೂ ಹೆಚ್ಚು ಎಕರೆ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದು, ಸಂಕಷ್ಟಕ್ಕೀಡಾಗಿರುವ ಅನ್ನದಾತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೊಂಡರಬಾಳು ಸರ್ವೇ ನಂಬರ್ ವ್ಯಾಪ್ತಿಯ ಟಿ.ಸಿ.ಹುಂಡಿ ಬಯಲಲ್ಲಿ ಹಾದು ಹೋಗಿರುವ ಹೊಂಗೆಹಳ್ಳ ಮತ್ತು ಗುಂಡಾಲ್ ಕಾಲುವೆ ನೀರು ಜಮೀನುಗಳಿಗೆ ನುಗ್ಗಿ ನಾಟಿ ಮಾಡಿದ್ದ ಭತ್ತದ ಫಸಲನ್ನು ಹಾಳುಗೆಡವಿದೆ. ಮೊಹಮ್ಮದ್ ಮುಹೀನ್, ಶಿವಮಲ್ಲು, ಮಲ್ಲಯ್ಯ, ದೊಡ್ಡ ಸಿದ್ದಯ್ಯ, ರಾಜೇಶ್, ದೊರೆ, ಸೋಮಣ್ಣ, ಮಾದಯ್ಯ, ಇಮ್ರಾನ್ ಪಾಷ, ಕಿರಣ್‌ಕುಮಾರ್, ಮುದ್ದುರಾಜ್, ಮಲ್ಲೇಗೌಡ ಇನ್ನಿತರ ರೈತರಿಗೆ ಸೇರಿದ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದೆ.

ನೀರಿನ ಅವಾಂತರದ ಬಗ್ಗೆ ಮೊಹಮ್ಮದ್ ಮುಹೀನ್ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಬಿದ್ದ ಮಳೆಯಿಂದ ಜಮೀನುಗಳು ಜಲಾವೃತವಾಗಿದೆ. ಜಮೀನುಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಕ್ಕದಲ್ಲಿರುವ ಕಾಲುವೆಗಳು ಹೂಳಿನಿಂದ ಭರ್ತಿಯಾಗಿದ್ದು ಕಾಲುವೆ ನೀರು ಸಹ ಜಮೀನು ಕಡೆಗೆ ಬರುತ್ತಿದೆ.

ಕಳೆದ ವಾರವಷ್ಟೇ ಲಕ್ಷಾಂತರ ರೂ. ಖರ್ಚು ಮಾಡಿ ಭತ್ತ ಪೈರು ನಾಟಿ ಮಾಡಿದ್ದೆ. ನನಗೆ ಸೇರಿದ 7 ಎಕರೆ ಜಮೀನು ಸಂಪೂರ್ಣ ಭರ್ತಿಯಾಗಿದೆ. ನೀರು ಜಮೀನಿನಿಂದ ಹೊರ ಬರಬೇಕಾದರೆ ಕಾಲುವೆ ಹೂಳು ತೆರವಾಗಬೇಕು. ಈ ಬಗ್ಗೆ ನೀರಾವರಿ ಅಧಿಕಾರಿಗಳಿಗೆ ದೂರು ನೀಡಿದರೆ ಕ್ಯಾರೆ ಎನ್ನುತ್ತಿಲ್ಲ. ಈಗಾಗಲೇ 3 ದಿನದಿಂದ ಜಮೀನಿನಲ್ಲಿ ನೀರು ನಿಂತಿದೆ. ಪೈರು ಹಾನಿಗೊಳಗಾಗಿದೆ. ಕಾಲುವೆಯಲ್ಲಿ ಹೂಳು ತೆಗೆಯದ ಕಾರಣ ಹೀಗಾಗಿದೆ. ಕೂಡಲೇ ನೀರಾವರಿ ಅಧಿಕಾರಿಗಳು ಕಾಲುವೆ ಹೂಳು ತೆಗೆದು ಜಮೀನು ನೀರು ಹೊರಹೋಗುವಂತೆ ಅವಕಾಶ ಮಾಡಬೇಕು. ಹಾನಿಗೊಳಾಗದ ಫಸಲಿಗೆ ಪರಿಹಾರ ನೀಡಬೇಕು ಎಂದರು.

ಹೂಳೆತ್ತಿಸದ ಅಧಿಕಾರಿಗಳ ವಿರುದ್ಧ ರೈತರು ಗರಂ: ಕಾಲುವೆಗಳಲ್ಲಿ ಹೂಳೆತ್ತಿದ್ದರೆ ಜಮೀನುಗಳಿಗೆ ನೀರು ಹೋಗುತ್ತಿರಲಿಲ್ಲ. ಸಮೀಪದ ದೊಡ್ಡ ರಂಗನಾಥ ಕೆರೆಗೆ ನೀರು ಹೋಗುತ್ತಿತ್ತು. ನೀರಾವರಿ ಅಧಿಕಾರಿಗಳು ಕಾಲುವೆ ನೀರು ಎತ್ತುವುದರಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರಹಾಕಿದರು.

ತಹಸೀಲ್ದಾರ್ ಬಳಿ ಅಳಲು ತೋಡಿಕೊಂಡ ರೈತರು: ಜಮೀನುಗಳು ಜಲಾವೃತಗೊಂಡು ಭತ್ತ ನಾಟಿ ಫಲಸುವ ಹಾನಿಗೊಳಗಾಗಿರುವ ಬಗ್ಗೆ ರೈತರು ದೂರವಾಣಿ ಮೂಲಕ ತಹಸೀಲ್ದಾರ್ ಬಸವರಾಜು ಅವರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದಾರೆ. ತಹಸೀಲ್ದಾರ್ ಅವರು ಗ್ರಾಮ ಲೆಕ್ಕಿಗರನ್ನು ಜಮೀನು ವೀಕ್ಷಣೆ ಮಾಡಲು ಸೂಚಿಸಿ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.