ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಗ್ರಾಮದ ಬಳಿ ಆಲಮಟ್ಟಿ ಎಡದಂಡೆ ಕಾಲುವೆ ಬುಧವಾರ ಒಡೆದು ಅಪಾರ ಪ್ರಮಾಣದಲ್ಲಿ ನೀರು ಜಮೀನುಗಳಿಗೆ ನುಗ್ಗಿ ಬೆಳೆಹಾನಿ ಉಂಟಾಗಿದೆ.
ತಾಲೂಕಿನ ಹರಿಂದ್ರಾಳ ಗ್ರಾಮದ ಬಳಿ (26.4ಕಿ.ಮೀ.) ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ಕಾಲುವೆ ನಿರ್ಮಿಸಿ ಇಪ್ಪತ್ತು ವರ್ಷಗಳಿಗೂ ಅಧಿಕ ಕಾಲ ಗತಿಸಿದೆ. ಕಾಲುವೆ ನವೀಕರಣಕ್ಕೆ ಹಿಂದಿನ ಸರ್ಕಾರ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕೆಲಸವನ್ನೂ ವಹಿಸಿತ್ತು. ಆದರೆ ಗುತ್ತಿಗೆದಾರರು ಈ ಕಾಲುವೆಯನ್ನು ತ್ವರಿತವಾಗಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳದೆ ನಿರ್ಲಕ್ಷೃ ವಹಿಸಿದ್ದರಿಂದ ಕಾಲುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹರಿಂದ್ರಾಳದ ರೈತ ಸಾಬಣ್ಣ ಬಿರಾದಾರ ಅವರ ಹೊಲದೊಳಕ್ಕೆ ನುಗ್ಗಿದೆ. ಎರಡೂವರೆ ಎಕರೆ ಪ್ರದೇಶದಲ್ಲಿ ಬಿತ್ತಿದ್ದ ಸಜ್ಜೆ ಬೆಳೆ ಪೂರ್ತಿ ಕೊಚ್ಚಿಕೊಂಡು ಹೋಗಿದೆ.
ಈ ಕುರಿತು ಮಾತನಾಡಿದ ರೈತರಾದ ಕಾಮೇಶ ನಾಗರಬೆಟ್ಟ, ತಾಪಂ ಮಾಜಿ ಸದಸ್ಯ ಯಮನಪ್ಪ ಹಾಲವಾರ, ಸಂಗಪ್ಪ ಬಿರಾದಾರ, ಬಸನಗೌಡ ಪಾಟೀಲ, ನಾಗಯ್ಯ ಹಿರೇಮಠ ಇತರರು, ಕಾಲುವೆ ನವೀಕರಣ ಕಾರ್ಯಕ್ಕೆ ಮುಂದಾಗದೆ ಬೇಜವಾಬ್ದಾರಿಯಿಂದ ನಡೆದುಕೊಂಡು ರೈತರ ಜಮೀನುಗಳಲ್ಲಿ ನೀರು ನುಗ್ಗಲು ಕಾರಣರಾದ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು. ಹಾನಿಯಾಗಿರುವ ಬೆಳೆಗೆ ಪರಿಹಾರವನ್ನು ಇಲಾಖೆಯ ಅಧಿಕಾರಿಗಳು ನೀಡಬೇಕು ಎಂದು ಒತ್ತಾಯಿಸಿದರು.
ಹರಿಂದ್ರಾಳ ಭಾಗದಲ್ಲಿ ಬರುವ ಸಂಗಪ್ಪ ಚಂಡಕಿ, ಕಮಲಪ್ಪ ವಾಲೀಕಾರ, ಶಂಕ್ರಪ್ಪ ವಾಲೀಕಾರ ಅವರ ಜಮೀನುಗಳಿಗೂ ಕಾಲುವೆ ನೀರು ನುಗ್ಗಿದೆ.
ಅಧಿಕಾರಿಗಳ ಭೇಟಿ, ತಾತ್ಕಾಲಿಕ ದುರಸ್ತಿ ಎಎಲ್‌ಬಿಸಿ ಕಾಲುವೆ ಒಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೆಬಿಜೆಎನ್‌ಎಲ್ ಇಇ ಆರ್.ಎಲ್. ಹಳ್ಳೂರ, ಎಇಇ ಅಶೋಕ ಬಿರಾದಾರ, ಅಬೂಬಕರ್ ಬಾಗವಾನ ಇತರರು, ಕಾಲುವೆ ಒಡೆದ ಭಾಗದಲ್ಲಿ ತಾತ್ಕಾಲಿಕವಾಗಿ ಮಣ್ಣು ಹಾಕಿಸಿ ಜಮೀನುಗಳಿಗೆ ನೀರು ಹರಿಯುವಿಕೆ ತಡೆದರು. ಕೆಬಿಜೆಎನ್‌ಎಲ್ ಎಇಇ ಅಶೋಕ ಬಿರಾದಾರ ಮಾತನಾಡಿ, ಸದ್ಯಕ್ಕೆ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಳಿಸಲಾಗಿದೆ. ಒಡೆದಿರುವ ಕಾಲುವೆಯನ್ನು ಎರಡ್ಮೂರು ದಿನಗಳಲ್ಲಿ ದುರಸ್ತಿ ಮಾಡಲಾಗುವುದು. ಕಾಲುವೆಯ ಪೂರ್ತಿ ರೀಮಾಡಲಿಂಗ್ ಕಾರ್ಯ ನೀರು ಹರಿಸುವಿಕೆ ಸ್ಥಗಿತಗೊಳಿಸಿದ ಬಳಿಕ ನಿರ್ವಹಿಸಲಾಗುತ್ತದೆ. ಬೆಳೆಹಾನಿ ಆಗಿರುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.