ಜಿಲ್ಲೆ

ಕಾಲುಬಾಯಿ ರೋಗಕ್ಕಿಲ್ಲ ಲಸಿಕೆ

ಶಿರಸಿ: ಕರೊನಾ ಆತಂಕದ ಮಧ್ಯೆ ಸರ್ಕಾರದ ಯುಐಡಿ (ಯುನಿಕ್ ಐಡೆಂಟಿಫಿಕೇಷನ್) ಯೋಜನೆಯೊಂದು ಸಮರ್ಪಕವಾಗಿ ಅನುಷ್ಠಾನವಾಗದಿರುವ ಕಾರಣಕ್ಕೆ ಜಾನುವಾರುಗಳಿಗೆ ಮಳೆಗಾಲದಲ್ಲಿ ಮಾರಣಾಂತಿಕವಾಗಿ ಕಾಡುವ ಕಾಲುಬಾಯಿ ಜ್ವರ ರೋಗಕ್ಕೆ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯ ಆರಂಭವಾಗಿಲ್ಲ.

ಕಾಲುಬಾಯಿ ರೋಗವು ಗೊರಸು ಕಾಲುಗಳುಳ್ಳ ಪ್ರಾಣಿಗಳಾದ ದನಗಳು, ಕುರಿ, ಆಡು ಮತ್ತು ಹಂದಿಗಳಿಗೆ ಬರುವ ಸಾಂಕ್ರಾಮಿಕ ರೋಗ. ಮಳೆಗಾಲ ಆರಂಭದೊಂದಿಗೆ ಮೇಯಲು ಬಿಡುವ ಜಾನುವಾರುಗಳಿಗೆ ಈ ರೋಗ ವ್ಯಾಪಕವಾಗುತ್ತದೆ. ರೋಗಕ್ಕೆ ತುತ್ತಾದ ಜಾನುವಾರುಗಳು ಜೀವಿತ ಅಸ್ಥಿಪಂಜರದಂತಾಗಿ ಅವುಗಳಿಗೆ ಕೆಚ್ಚಲು ಬಾವು, ಗರ್ಭಪಾತ, ಗರ್ಭ ಧರಿಸದಿರುವಿಕೆ, ಹಾಲು ಉತ್ಪಾದನೆ ಇಳಿಮುಖವಾಗುವುದು, ಜತೆಗೆ ಬಿಸಿಲು ಧಾರಣ ಶಕ್ತಿ ಕುಂಠಿತವಾಗುತ್ತದೆ. ಈ ರೋಗ ಜಾನುವಾರುಗಳಿಗೆ ಮರಣ ಶಾಸನವಾದರೆ ಹೈನುಗಾರರಿಗೆ ನಷ್ಟದ ಹೊರೆಯಾಗುತ್ತದೆ. ಹೀಗಾಗಿ ಪ್ರತಿ ವರ್ಷ ಜುಲೈ, ಆಗಸ್ಟ್​ನಲ್ಲಿ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗುತ್ತಿತ್ತು. ಆದರೆ, ಈ ವರ್ಷ ಈವರೆಗೆ ಸರ್ಕಾರದಿಂದ ಸುತ್ತೋಲೆ ಬಂದಿಲ್ಲ. ಪ್ರಸ್ತುತ ಶಿರಸಿ, ಸಿದ್ದಾಪುರ ಸೇರಿ ಆರೇಳು ತಾಲೂಕುಗಳ ಕೆಲ ಹಳ್ಳಿಗಳಲ್ಲಿ ಈ ರೋಗ ಆರಂಭ ಕಂಡಿದೆ. ಇದು ಜಾನುವಾರು ಮಾಲೀಕರ ಆತಂಕಕ್ಕೆ ಕಾರಣವಾಗಿದೆ.

ಅಡ್ಡಗಾಲಾದ ಯೋಜನೆ: ಜಾನುವಾರುಗಳಿಗೆ ಗುರುತಿನ ಚೀಟಿ ನೀಡಲು ಮೂರು ವರ್ಷಗಳ ಹಿಂದೆ ಜಾರಿಗೊಳಿಸಿದ್ದ ಯುಐಡಿ ಯೋಜನೆ ಜಿಲ್ಲೆಯಲ್ಲಿ ಶೇ. 30ರಷ್ಟು ಸಾಧನೆಯಾಗಿಲ್ಲ. ಯೋಜನೆ ಪೂರ್ಣಗೊಂಡ ಬಳಿಕವೇ ಸರ್ಕಾರ ಕಾಲುಬಾಯಿ ಜ್ವರ ರೋಗಕ್ಕೆ ಲಸಿಕೆ ಹಾಕಲು ಸೂಚಿಸುವುದಾಗಿ ತಿಳಿಸಿದೆ. ಲಸಿಕೆ ಹಾಕುವಲ್ಲಿ ವಿಳಂಬವಾಗಲು ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದಿರುವುದೇ ಮುಖ್ಯ ಕಾರಣವಾಗಿದೆ. ಜಿಲ್ಲೆಯಲ್ಲಿ ಅಂದಾಜು 4,19,223 ಹಸು, ಎಮ್ಮೆ ಮುಂತಾದ ಜಾನುವಾರುಗಳಿವೆ. ಸದ್ಯ 1,30,800 ಕಾರ್ಡ್​ಗಳು ಪೂರೈಕೆಯಾಗಿದ್ದು, ಅದರಲ್ಲಿ 1,12,472 ಜಾನುವಾರುಗಳಿಗೆ ಗುರುತಿನ ಚೀಟಿ ಅಳವಡಿಸಲಾಗಿದೆ. ಇನ್ನೂ 3 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಇದನ್ನು ಅಳವಡಿಸುವುದು ಬಾಕಿ ಇದೆ. ಈ ಕಾರ್ಯ ಪೂರ್ಣಗೊಂಡ ನಂತರವೇ ಜಾನುವಾರುಗಳಿಗೆ ಲಸಿಕೆ ಭಾಗ್ಯ ದೊರೆಯಲಿದೆ.

ಕರೊನಾ ಆತಂಕ: ಜಾನುವಾರುಗಳಿರುವ ಪ್ರತಿ ಮನೆಗೆ ತೆರಳಿ ಲಸಿಕೆ ನೀಡಬೇಕು. ಆದರೆ, ನಗರದಿಂದ ಬಂದವರನ್ನು ಹಳ್ಳಿಗಳಲ್ಲಿ ಸದ್ಯದ ಸ್ಥಿತಿಯಲ್ಲಿ ತೀರಾ ಕೀಳಾಗಿ ನೋಡುತ್ತಾರೆ. ಮನೆ, ಕೊಟ್ಟಿಗೆ ಪ್ರವೇಶಕ್ಕೂ ನಿರಾಕರಣೆ ಮಾಡುತ್ತಾರೆ. ಅಲ್ಲದೆ, ಗೊತ್ತುಗುರಿಯಿಲ್ಲದ ಜಾಗಕ್ಕೆ ತೆರಳಲು ನಮಗೂ ಆತಂಕ. ಹೀಗಾಗಿ ಸರ್ಕಾರದಿಂದ ಸೂಚನೆ ಬಂದರೂ ಕರೊನಾ ಭಯ ಹೋಗುವವರೆಗೆ ಲಸಿಕೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ಹೆಸರು ಹೇಳಲಿಚ್ಚಿಸದ ಪಶು ವೈದ್ಯರೊಬ್ಬರ ಅಭಿಪ್ರಾಯ.

ಮಳೆಗಾಲ ಆರಂಭವಾಗಿದ್ದು, ಜಾನುವಾರುಗಳಲ್ಲಿ ಕಾಲುಬಾಯಿ ಒಡೆ ಕಾಣಿಸಿಕೊಳ್ಳುತ್ತಿದೆ. ಖಾಸಗಿಯಾಗಿ ಈ ಲಸಿಕೆ ಹಾಕಿಸಲು ಹೆಚ್ಚಿನ ಹಣ ನೀಡಬೇಕಿದೆ. ಪ್ರತಿ ವರ್ಷ ಸರ್ಕಾರದಿಂದಲೇ ಈ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿತ್ತು. ಆದರೆ, ಈ ವರ್ಷ ಇನ್ನೂ ಯೋಜನೆಗೆ ಅನುಮತಿ ಸಿಗದಿರುವುದು ಹೈನುಗಾರರ ಪಾಲಿಗೆ ಆಘಾತವಾಗಿದೆ. ಯುಐಡಿ ಯೋಜನೆ ನಿಧಾನವಾದರೂ ಆತಂಕವಿಲ್ಲ. ಆದರೆ, ಈ ರೋಗಕ್ಕೆ ತ್ವರಿತವಾಗಿ ಲಸಿಕೆ ಹಾಕಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲವಾದರೆ ಹೈನುಗಾರರಿಗೆ ಆಗುವ ನಷ್ಟಕ್ಕೆ ನೇರವಾಗಿ ಸರ್ಕಾರವೇ ಜವಾಬ್ದಾರವಾಗುತ್ತದೆ. | ನಾರಾಯಣ ಗೌಡ ಯಡಳ್ಳಿ ಹೈನುಗಾರ ಪ್ರತಿ ವರ್ಷ ಈ ವೇಳೆಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರಕುತ್ತಿತ್ತು. ಆದರೆ, ಈ ವರ್ಷ ಇನ್ನೂ ಸರ್ಕಾರ ಆದೇಶ ನೀಡಿಲ್ಲ. ಯುಐಡಿ ಟ್ಯಾಗ್ ಪಂಚ್ ಮುಗಿದ ಮೇಲೆ ಆದೇಶ ಸಿಗುವ ಸಾಧ್ಯತೆಯಿದೆ. ಹೀಗಾಗಿ ಯುಐಡಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಶ್ರಮಿಸಲಾಗುವುದು. | ಡಾ. ನಂದಕುಮಾರ ಪೈ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ