ಜಿಲ್ಲೆ

ಕಾಲುಬಾಯಿ ತಡೆಗೆ ಅಧಿಕಾರಿಗಳು ಸಹಕರಿಸಿ, ತಹಸೀಲ್ದಾರ್ ಗೀತಾ ಮನವಿ, ನಾಳೆಯಿಂದ ಡಿ.7ರವರೆಗೆ ಲಸಿಕಾ ಅಭಿಯಾನ

Bengaluru Rural

ಹೊಸಕೋಟೆ: ತಾಲೂಕಿನಲ್ಲಿ ಹಸು, ಎಮ್ಮೆಗಳಿಗೆ ಕಾಲುಬಾಯಿ ರೋಗ ತಗುಲದಂತೆ ತಡೆಯಲು ನ.8 ರಿಂದ ಡಿಸೆಂಬರ್ 7 ರವರೆಗೆ ಪಶುಪಾಲನೆ ಇಲಾಖೆಯಿಂದ ಲಸಿಕಾ ಅಭಿಯಾನ ಆಯೋಜಿಸಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿ ಕಾಲುಬಾಯಿ ರೋಗಮುಕ್ತ ತಾಲೂಕಾಗಿಸಬೇಕು ಎಂದು ತಹಸೀಲ್ದಾರ್ ಗೀತಾ ಮನವಿ ಮಾಡಿದರು.

ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಪಶುಸಂಗೋಪನ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾಲುಬಾಯಿ ರೋಗ ಲಸಿಕೆ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಒಟ್ಟು 35 ಸಾವಿರ ಜಾನುವಾರುಗಳಿದ್ದು, ಪ್ರತಿ ಗ್ರಾಮದ ಜಾನುವಾರುಗಳನ್ನು ಗುರುತಿಸಿ ಲಸಿಕೆ ನೀಡಬೇಕು. ನಿತ್ಯ ಮುಂಜಾನೆ 6.30 ರಿಂದ 11 ಗಂಟೆವರೆಗೆ ಚಚ್ಚುಮದ್ದು ನೀಡಲಾಗುವುದು. ಈ ಕಾರ್ಯಕ್ಕೆ ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದ್ದು, 40 ಸಿಬ್ಬಂದಿ ಅಭಿಯಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಧಿಕಾರಿಗಳು ಸಹ ಕಾಲುಬಾಯಿ ರೋಗ ನಿರ್ಮೂಲನೆಗೆ ಸಹಕಾರ ನೀಡಬೇಕೆಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ತಿಳಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ್, ಹೊಸಕೋಟೆ ಡೇರಿ ಉಪವ್ಯವಸ್ಥಾಪಕ ಶಿವಾಜಿ ನಾಯಕ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.