ಜಿಲ್ಲೆ

ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮುಂದೂಡಲು ಒತ್ತಾಯ

ಬೆಂಗಳೂರು: ರಾಜ್ಯಾದ್ಯಂತ ಅ. 2ರಂದು ಹಮ್ಮಿಕೊಂಡಿರುವ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮುಂದೂಡುವಂತೆ ಕರ್ನಾಟಕ ಪಶುವೈದ್ಯಕೀಯ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಈಗಾಗಲೇ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಹೀಗಿರುವಾಗ ಕಾಲುಬಾಯಿ ಜ್ವರದ ಲಸಿಕೆ ಹಾಕುವುದರಿಂದ ಅಡ್ಡಪರಿಣಾಮ ಬೀರಲಿದೆ. ಜತೆಗೆ ಇದು ವೈರಾಣು ರೋಗ ಆಗಿರುವುದರಿಂದ ಪಶುವೈದ್ಯರು ಹಾಗೂ ಸಿಬ್ಬಂದಿ ಗ್ರಾಮದಿಂದ ಗ್ರಾಮಕ್ಕೆ ತೆರಳಿದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಲಸಿಕಾ ಕಾರ್ಯಕ್ರಮವನ್ನು ಎರಡು ತಿಂಗಳ ಅವಧಿಗೆ ಮುಂದೂಡಬೇಕು ಎಂದು ಸಂಘದ ಅಧ್ಯಕ್ಷ ಡಾ. ಎಸ್.ಸಿ. ಸುರೇಶ್ ಪಶುಸಂಗೋಪಾ ಇಲಾಖೆಗೆ ಮನವಿ ಮಾಡಿದ್ದಾರೆ.

ಈ ಕುರಿತು ಇತ್ತೀಚೆಗೆ ಸಂಘವು ನಡೆಸಿದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೊದಲು ಚರ್ಮಗಂಟು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈ ರೋಗ ನಿಯಂತ್ರಣಕ್ಕೆ ಬಂದ ನಂತರ ಕಾಲುಬಾರಿ ಜ್ವರದ ಲಸಿಕೆ ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಹಾಕಬೇಕಾಗಿದ್ದ ಲಸಿಕೆ ಸಕಾಲದಲ್ಲಿ ಪೂರೈಕೆ ಆಗದ ಕಾರಣ ಮುಂದೂಡಲಾಗಿತ್ತು. ಇದೀಗ ಚರ್ಮಗಂಟು ರೋಗದಿಂದ ಜಾನುವಾರುಗಳು ಬಳಲುತ್ತಿವೆ. ಈಗ ಲಸಿಕೆ ಹಾಕುವುದರಿಂದ ಜಾನುವಾರುಗಳ ಪ್ರಾಣಕ್ಕೆ ಅಪಾಯ ಹೀಗಾಗಿ ಸದ್ಯಕ್ಕೆ ಲಸಿಕೆ ಹಾಕುವುದು ಬೇಡವೆಂದು ವಿಜ್ಞಾನಿಗಳೇ ತಿಳಿಸಿದ್ದಾರೆ. ಜತಗೆ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತಡದಲ್ಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಲಸಿಕಾ ಕಾರ್ಯಕ್ರಮವನ್ನು ಎರಡು ತಿಂಗಳ ಕಾಲ ಮುಂದೂಡುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಎ.ಡಿ. ಡಾ. ಶಿವರಾಮ್ ಇಲಾಖೆಯನ್ನು ಕೋರಿದ್ದಾರೆ.