ಮದ್ದೂರು: ಮೂರ್ಛೆ ರೋಗಕ್ಕೆ ಚಿಕಿತ್ಸೆ ಪಡೆಯಲೆಂದು ತೆರಳಿದ್ದ ವೇಳೆ ಯುವಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಾಲು ಮುರಿದಿದ್ದು, ಒಂದು ವಾರದಿಂದ ತೆವಳಿಕೊಂಡೇ ಜೀವನ ನಡೆಸುತ್ತಿದ್ದಾನೆ.
ಸಿಗಂದೂರು ಗ್ರಾಮದ ದಿವಂಗತ ನಾರಾಯಣ-ಲಕ್ಷ್ಮೀ ದಂಪತಿಯ ಪುತ್ರ ಚಂದ್ರು (35) ಗುಜರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ತಂದೆ ನಾರಾಯಣ 2 ವರ್ಷಗಳ ಹಿಂದೆ, ತಾಯಿ ಲಕ್ಷ್ಮೀ 6 ತಿಂಗಳ ಹಿಂದೆ ನಿಧನ ಹೊಂದಿದರು.
ಚಂದ್ರುವಿಗೆ ಮೂರ್ಛೆರೋಗ ಇದ್ದ ಕಾರಣ ವಾರದ ಹಿಂದೆ ಚಿಕಿತ್ಸೆಗಾಗಿ ಕುಣಿಗಲ್‌ಗೆ ರೈಲಿನಲ್ಲಿ ತೆರಳಿ, ಅಲ್ಲಿಂದ ತಾಲೂಕಿನ ಯರಗನಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗುವಾಗ ಅಪರಿಚಿತ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಮೊಣಕಾಲು ಮುರಿದಿದ್ದು, ನಡೆಯಲು ಆಗದೆ ಅಲ್ಲೇ ರಾತ್ರಿ ಕಳೆದಿದ್ದನು. ನಂತರ ಈತನಿಗೆ ಯಗರನಹಳ್ಳಿ ಗ್ರಾಮಸ್ಥರು ಊಟ, ತಿಂಡಿ, ನೀರು ಇನ್ನಿತರ ಸೌಕರ್ಯಗಳನ್ನು ನೀಡಿ ಆರೈಕೆ ಮಾಡಿದ್ದಾರೆ.
ಇದೀಗ ಎಲ್ಲಿಗೆ ಹೋದರೂ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಒಂದು ವಾರದಿಂದ ಗ್ರಾಮದ ಬಸ್ ತಂಗುದಾಣದಲ್ಲಿ ಚಳಿಯಲ್ಲಿ ಕಾಲ ಕಳೆಯುತ್ತಿರುವ ಚಂದ್ರು, ರಾತ್ರಿಯ ವೇಳೆ ತುಮಕೂರು-ಮದ್ದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆಗೆ ತೆವಳಿಕೊಂಡು ಹೋಗುತ್ತಿದ್ದಾನೆ. ಈ ಸಮಯದಲ್ಲಿ ಯಾವುದಾದರೂ ವಾಹನ ಡಿಕ್ಕಿ ಹೊಡದರೆ ಪ್ರಾಣಾಪಾಯವಾಗುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಈತನನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ.
ಅಪ್ಪ-ಅಮ್ಮ ಇಲ್ಲದ ಅನಾಥ ನಾನು. ಮೂರ್ಛೆ ರೋಗಕ್ಕೆ ಚಿಕಿತ್ಸೆ ಪಡೆಯಲು ಹೋಗುವಾಗ ಬೈಕ್ ಡಿಕ್ಕಿ ಹೊಡೆದು ಕಾಲು ಮರಿದಿದೆ. ಇದರಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ನನಗೆ ಸರ್ಕಾರ ಹಾಗೂ ಸಂಬಂಧಿಸಿದವರು ಚಿಕಿತ್ಸೆ ಕೊಡಿಸಿದರೆ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತೇನೆ ಎನ್ನುತ್ತಾರೆ ಚಂದ್ರು.