ಮದ್ದೂರು: ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ವಿಶೇಷ ಗಮನ ನೀಡಬೇಕು ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ್‌ಗೌಡ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಮದ್ದೂರು, ಪಿಡಿಎಫ್ ಲಯನ್ಸ್ ಸಂಸ್ಥೆ, ಇನ್ನರ್ ವ್ಹೀಲ್ ಮದ್ದೂರು, ಕಾವೇರಿ ಲಯನ್ಸ್, ಕಂಪನಿಯ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಕಾಲು ನೋವಿಗೆ ಉಚಿತ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಎಷ್ಟೇ ಹಣವಿದ್ದರೂ ಆರೋಗ್ಯವಿಲ್ಲದಿದ್ದರೆ ನೆಮ್ಮದಿ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಡಿ.30 ವರೆಗೆ ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಕಾಲು ನೋವಿಗೆ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಚಿಕಿತ್ಸೆ ಪಡೆಯುವುದರಿಂದ ಕಾಲುನೋವು, ಅಧಿಕ ರಕ್ತದೊತ್ತಡ, ಊತ, ಥೈರಾಯ್ಡ, ಮಂಡಿನೋವು, ಸಂಧಿವಾತ, ಮಧುಮೇಹ, ಸ್ನಾಯು ಸೆಳೆತ ಸೇರಿದಂತೆ ವಿವಿಧ ರೋಗಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಶಿವಣ್ಣ, ರಾಜೇಶ್, ಪ್ರಕಾಶ್, ಕುಮಾರ್ ಸಾದೊಳಲು, ಸ್ವಾಮಿ, ಕಂಪನಿಯೋ ಸಂಸ್ಥೆಯ ವ್ಯವಸ್ಥಾಪಕ ರಾಮು ಇದ್ದರು.