ನಂಜನಗೂಡು: ಕ್ಯಾನ್ಸರ್ ಪೀಡಿತನಾಗಿ ಒಂದು ಕಾಲು ಕಳೆದುಕೊಂಡರೂ ಅತ್ಮವಿಶ್ವಾಸವನ್ನು ಕಳೆದುಕೊಳ್ಳದೆ, ಭೂಮಿಯನ್ನೇ ನಂಬಿ ಬಂಗಾರದ ಬೆಳೆ ತೆಗೆದು ಬದುಕು ಬಂಗಾರ ಮಾಡಿಕೊಂಡಿರುವ ತಾಲೂಕಿನ ಕಪ್ಪಸೋಗೆ ಗ್ರಾಮದ 25 ವರ್ಷದ ಯುವ ರೈತ ಮಹೇಂದ್ರ ಯುವಕರಿಗೆ ಮಾದರಿಯಾಗಿದ್ದಾರೆ.
ದೃಢ ಸಂಕಲ್ಪವೊಂದಿದ್ದರೆ ಅಸಾಧ್ಯವೆಂಬುದು ಯಾವುದೂ ಇಲ್ಲ ಎಂಬುದಕ್ಕೆ ಕ್ಯಾನ್ಸರ್ ಪೀಡಿತನಾಗಿ ಒಂದು ಕಾಲು ಕಳೆದುಕೊಂಡಿದ್ದರೂ ಛಲ ಬಿಡದೆ ಕೃಷಿಯನ್ನೇ ಜೀವನ ನಿರ್ವಹಣೆಯನ್ನು ಆಧಾರವನ್ನಾಗಿಸಿಕೊಂಡಿರುವ ಮಹೇಂದ್ರ ಒಂಟಿ ಕಾಲಿನಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿ ಬಲಗಾಲಿನಲ್ಲಿ ಕಾಣಿಸಿಕೊಂಡ ಗಂಟೊಂದು ಪರೀಕ್ಷೆ ಬಳಿಕ ಕ್ಯಾನ್ಸರ್ ಗೆಡ್ಡೆಯೆಂದು ದೃಢವಾಯಿತಲ್ಲದೆ ನಂತರ ಚಿಕಿತ್ಸೆ ವೇಳೆ ಅನಿವಾರ್ಯವಾಗಿ ಬಲಗಾಲನ್ನು ನಡುವಿನವರೆಗೂ ತೆಗೆಯಬೇಕಾಯಿತು. ಅವಿದ್ಯಾವಂತ ತಂದೆ-ತಾಯಿ ಹಾಗೂ ಅವಿವಾಹಿತ ಸೋದರಿಯನ್ನೊಳಗೊಂಡಿದ್ದ ಕುಟುಂಬದ ನಿರ್ವಹಣೆಯ ಭವಿಷ್ಯದ ಚಿಂತೆ ಕಾಡತೊಡಗಿತು.
ಇದೇ ವೇಳೆ ಜಾಲತಾಣಗಳಲ್ಲಿ ಲಭ್ಯವಿದ್ದ ಅಂಗವಿಕಲರ ಸಾಧಕರ ಯಶೋಗಾಥೆಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದ ಮಹೇಂದ್ರ ಒಂದು ಕಾಲಿಲ್ಲದಿದ್ದರೇನಂತೆ ದೃಢ ಸಂಕಲ್ಪವೊಂದಿದ್ದಲ್ಲಿ ಖಂಡಿತಾ ಏನನ್ನಾದರೂ ಸಾಧಿಸಬಹುದು ಎಂದು ನಿಶ್ಚಯಿಸಿದ ಮಹೇಂದ್ರನಿಗೆ ಸ್ಥಳೀಯರು ಊರಿನಲ್ಲಿಯೇ ಗೂಡಂಗಡಿಯೊಂದನ್ನು ತೆರೆಯುವಂತೆ ಕೆಲವರು ಸಲಹೆ ನೀಡಿದರಾದರೂ ಕೃಷಿಯನ್ನು ಕೈಗೊಳ್ಳುವ ದೃಢ ನಿರ್ಧಾರ ಕೈಗೊಂಡು ತಮಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಕೃಷಿ ಚಟುವಟಿಕೆ ಆರಂಭಿಸಿದರು.
ತಮ್ಮ ಜಮೀನಿನೊಂದಿಗೆ ಪಕ್ಕದಲ್ಲಿದ್ದ ಮೂರು ಎಕರೆ ಜಮೀನನ್ನು ಗುತ್ತಿಗೆ ಪಡೆದು ಜಮೀನಿನಲ್ಲಿ ಟೊಮ್ಯಾಟೊ, ಏಲಕ್ಕಿ ಬಾಳೆ, ಚೆಂಡು ಹೂ, ಮೆಕ್ಕೆಜೋಳ, ಹಾಗಲಕಾಯಿ, ಬದನೆಕಾಯಿ ಬೆಳೆದಿರುವ ರೈತ ಮಹೇಂದ್ರ ಕರೊನಾ ಸಂಕಷ್ಟದ ಸಮಯದಲ್ಲೂ ಕೃಷಿಯಿಂದ ನಷ್ಟವನ್ನು ಅನುಭವಿಸಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇನ್ನು ಕೃಷಿಯಲ್ಲಿ ಗಳಿಸಿದ ಲಾಭದಲ್ಲಿ ಸಹೋದರಿಯ ವಿವಾಹವನ್ನೂ ನಡೆಸಿದ ತೃಪ್ತಿ ಹೊಂದಿದ್ದಾರೆ.
ತಂದೆ-ತಾಯಿ ನೆರವು: ಸದ್ಯ 2.1 ಎಕರೆ ಪ್ರದೇಶದಲ್ಲಿ ಬಾಳೆ, ಟೊಮ್ಯಾಟೊ, ಚೆಂಡು ಹೂ ಬೆಳೆದಿದ್ದಾರೆ. ಇನ್ನು ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ನಡೆಸುತ್ತಿರುವ ಮಹೇಂದ್ರ 2 ಹಸುಗಳನ್ನು ಸಾಕಿಕೊಂಡು ಹಾಲನ್ನು ಡೇರಿಗೆ ಹಾಕುವ ಮೂಲಕ ಜೀವನ ನಿರ್ವಹಣೆಗೆ ಮಾಸಿಕ ಆದಾಯವನ್ನು ಹಾಲು ಮಾರಾಟದ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ವಾರ್ಷಿಕ ಕನಿಷ್ಠ 3.5 ಲಕ್ಷ ರೂ.ಗಳ ನಿಶ್ಚಿತ ಆದಾಯ ಪಡೆಯುತ್ತಿದ್ದೇನೆ ಎನ್ನುವ ರೈತ ಮಹೇಂದ್ರನಿಗೆ ಕೃಷಿ ಚಟುವಟಿಕೆಯಲ್ಲಿ ತಂದೆ-ತಾಯಿ ನೆರವಾಗುತ್ತಿದ್ದಾರೆ.
ಒಂದೇ ಕಾಲಿನಲ್ಲೇ ಓಡಾಟ: ಒಂದೇ ಕಾಲಿನಲ್ಲಿಯೂ ಜಮೀನಿನ ತುಂಬಾ ಓಡಾಡಿಕೊಂಡು ಆಳುಗಳೊಡನೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ಮಹೇಂದ್ರ ತ್ರಿಚಕ್ರ ವಾಹನದ ಮೂಲಕ ಮನೆಯಿಂದ ಜಮೀನಿಗೆ ತೆರಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗುವ ಕೃಷಿ ಸಾಧಕರು ಹಾಗೂ ವಿಜ್ಞಾನಿಗಳ ಸಲಹೆಯನ್ನು ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಂಡು ಸುಧಾರಿತ ಪದ್ಧತಿ ಅಳವಡಿಕೊಂಡಿದ್ದಾರೆ. ಜತೆಗೆ ನೆರೆಯ ರಾಜ್ಯಗಳೂ ಸೇರಿದಂತೆ ರಾಜ್ಯದ ವಿವಿಧೆಡೆಯ ಮಾರುಕಟ್ಟೆಗಳ ವಹಿವಾಟಿನ ಅರಿವನ್ನು ಹೊಂದಿರುವ ಮಹೇಂದ್ರ ಹೆಚ್ಚು ಬೆಲೆ ಲಭ್ಯವಾಗುವ ಸ್ಥಳಕ್ಕೆ ತರಕಾರಿ ಬೆಳೆಯನ್ನು ಮಾರಾಟಕ್ಕೆ ಕಳುಹಿಸುತ್ತಾರೆ. ಇದರಿಂದಾಗಿ ಊರಿನ ಕೆಲ ರೈತರು ಈಗ ಮಹೇಂದ್ರನ ಮಾರುಕಟ್ಟೆ ಚಾಕಚಕ್ಯತೆಯನ್ನೇ ಅವಲಂಬಿಸಿದ್ದಾರೆ.
ಗೇಲಿ ಮಾಡಿದ್ದರು: ಒಂಟಿ ಕಾಲಿನಲ್ಲಿ ಕೃಷಿ ಕಾಯಕಕ್ಕೆ ಇಳಿದ ರೈತ ಮಹೇಂದ್ರನನ್ನು ನೋಡಿ ಆರಂಭದಲ್ಲಿ ಕೆಲವರು ಗೇಲಿ ಮಾಡಿದ್ದರು. ಬಳಿಕ ನೆರೆಯ ಜಮೀನನ್ನೂ ಗುತ್ತಿಗೆ ಪಡೆದುಕೊಂಡು ಸಂಕಷ್ಟದಲ್ಲಿ ನಡೆಸುತ್ತಿದ್ದ ಕೃಷಿ ಚಟುವಟಿಕೆ ಕಂಡು ಮರುಕಪಟ್ಟಿದ್ದರು. ಆದರೆ, ಇದೀಗ ರೈತ ಮಹೇಂದ್ರ ಕೃಷಿಯಲ್ಲಿ ಲಾಭ ಗಳಿಸುತ್ತಿರುವುದನ್ನು ಕಂಡು ಸ್ಥಳೀಯರು ಸಂತಸವ್ಯಕ್ತಪಡಿಸುತ್ತಾರೆ. ಇನ್ನು ಒಂಟಿ ಕಾಲಿನಲ್ಲಿ ಕೃಷಿಯನ್ನೇ ಆಧಾರವಾಗಿಸಿಕೊಂಡು ರೈತ ಮಹೇಂದ್ರ ನಡೆಸುತ್ತಿರುವ ಕಾಯಕವನ್ನು ಗಮನಿಸಿ ಕೆಲ ಸಂಘ ಸಂಸ್ಥೆಗಳವರು ಮಹೇಂದ್ರರನ್ನು ಸನ್ಮಾನಿಸಿದ್ದಾರೆ.
ರಗ್ಬಿ ರಾಷ್ಟ್ರೀಯ ಕ್ರೀಡಾಪಟು: ಮಹೇಂದ್ರ ಕೇವಲ ಪ್ರಗತಿಪರ ರೈತರಷ್ಟೇ ಅಲ್ಲದೆ ವ್ಹೀಲ್‌ಚೇರ್ ರಗ್ಬಿ ರಾಷ್ಟ್ರೀಯ ಕ್ರೀಡಾಪಟುವೂ ಹೌದು. ಹಲವು ಬಾರಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಮಹೇಂದ್ರ ಕಳೆದ ವರ್ಷ ನಡೆದ ರಾಷ್ಟ್ರೀಯ ಮಟ್ಟದ ವ್ಹೀಲ್‌ಚೇರ್ ರಗ್ಬಿ ಪಂದ್ಯಾವಳಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೆಲುವು ಸಾಧಿಸುವಲ್ಲೂ ಇವರು ಪ್ರಮುಖ ಪಾತ್ರವಹಿಸುವ ಮೂಲಕ ಉತ್ತಮ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.