ಬೆಂಗಳೂರು ಗ್ರಾಮಾಂತರ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಪ್ರತಿ ಅಧಿಕಾರಿಯ ಕರ್ತವ್ಯ. ಯೋಜನೆಗಳಿಗೆ ಸಂಬಂಧಿಸಿದ ಟೆಂಡರ್‌ಗಳನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ದೇವನಹಳ್ಳಿ ತಾಲೂಕು ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಟೆಂಡರ್ ಪ್ರಕ್ರಿಯೆಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಯೋಜನೆಗಳು ನನೆಗುದಿಗೆ ಬೀಳುವ ಅಪಾಯವಿದೆ. ಅಧಿಕಾರಿಗಳು, ಇಲಾಖೆಗಳ ಸಹಯೋಗದಲ್ಲಿ ಟೆಂಡರ್ ಕರೆದು ನಿಗದಿತ ಕಾಲಾವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಶೇ.100 ಪ್ರಗತಿ ಸಾಧಿಸಿ: ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳಡಿಯಲ್ಲಿ ಬಿಡುಗಡೆಯಾಗಿರುವ ಹಣವನ್ನು ಜಿಲ್ಲೆಯ ಎಲ್ಲ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡುವ ಮೂಲಕ ಶೇ.100 ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಯಾವುದೇ ಲಾನುಭವಿಗಳು ಯೋಜನೆಗಳಿಂದ ಹೊರಗುಳಿಯಬಾರದು. ಲಾನುಭವಿಗಳಿಗೆ ಮಾಹಿತಿ ನೀಡಿ ಸಮರ್ಪಕ ದಾಖಲೆ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಬದ್ಧತೆ ತೋರಬೇಕು ಎಂದು ತಿಳಿಸಿದರು.
ಮಾನದಂಡ ಅನುಸರಿಸಿ: ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ, ಇಲಾಖಾವಾರು ನಿಗದಿಪಡಿಸಲಾದ ಮಾನದಂಡ ಅನುಸರಿಸಿ, ಫಲಾನುಭವಿಗಳನ್ನು ಗುರುತಿಸುವ ಮೂಲಕ ಸೌಲಭ್ಯ ತಲುಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಹೇಳಿದರು.
ಸೌಲಭ್ಯ ಅನರ್ಹರ ಪಾಲಾಗಬಾರದು, ಈ ವಿಷಯದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಬೇಕು. ಯಾವುದೆ ಒತ್ತಡ ಅಥವಾ ಇನ್ಯಾವುದೇ ಕಾರಣಕ್ಕೆ ಲಾನುಭವಿಗಳ ಆಯ್ಕೆಯಲ್ಲಿ ಮಾನದಂಡವನ್ನು ಮೀರಬಾರದು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಕಾರ್ಯಕ್ರಮಗಳಡಿಯಲ್ಲಿ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಲಾಗುತ್ತಿದೆ. ಅರ್ಹರಿಗೆ ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಡಿಸಿಯಿಂದ ಸಲಹೆ ಸೂಚನೆ: ಸಭೆಯಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನ, ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳು, ಗೊಂದಲವಿದ್ದರೆ ಯಾರನ್ನು ಸಂಪರ್ಕಿಸಬೇಕು, ದಾಖಲೆಗಳ ಸಂಗ್ರಹ ಹೇಗೆ ನಿರ್ವಹಿಸಬೇಕು ಮತ್ತಿತರ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಚರ್ಚಿಸಿದರು.