ಜಿಲ್ಲೆ

ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ಸೂಚನೆ, ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ

ಬೆಂಗಳೂರು ಗ್ರಾಮಾಂತರ: ಪ್ರಸಕ್ತ ಹಣಕಾಸು ವರ್ಷದ ಪೂರ್ಣ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು, ನಿಗದಿಯಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಗಮನ ನೀಡಬೇಕು ಎಂದು ಸರ್ಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಪಿ.ಹೇಮಲತಾ ಸೂಚಿಸಿದರು.

ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಪ್ರಗತಿ ಪರಿಶೀಲನೆ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಭೆಯಲ್ಲಿ ಮಾತನಾಡಿದರು. ಹಣಕಾಸು ವರ್ಷದ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಿದ್ದರೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ, ಅಧಿಕಾರಿಗಳು ಸರಿಯಾದ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಲಾವಧಿಯಲ್ಲಿ ಹಣವನ್ನು ಯೋಜನೆ ಅನುಷ್ಠಾನಕ್ಕೆ ವಿನಿಯೋಗಿಸಬೇಕು ಎಂದರು.

ಅನುದಾನ ಸದ್ಭಳಕೆಯಾಗಲಿ: ಕಾಮಗಾರಿಗಳು ವಿಳಂಬವಾಗದಂತೆ ಶೀಘ್ರವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವುದರೊಂದಿಗೆ ಅಂದಾಜು ವೆಚ್ಚದ ಅನುಮೋದನೆ ಪಡೆದು ಕ್ರಮ ಕೈಗೊಳ್ಳಬೇಕು. ಅನುದಾನ ಬಳಸಿಕೊಂಡು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸಬೇಕು ಎಂದು ಹೇಮಲತಾ ತಾಕೀತು ಮಾಡಿದರು.

ಲೋಕೋಪಯೋಗಿ ಇಲಾಖೆಯ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ವಯಸ್ಕರ ಶಿಕ್ಷಣ ಕಾರ್ಯಕ್ರಮದ ಮೂಲಕ ಅನಕ್ಷರಸ್ಥರಿಗೆ ಶಿಕ್ಷಣ ನೀಡಿ, ಅಕ್ಷರಸ್ಥರನ್ನಾಗಿಸುವ ಮೂಲಕ ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಸಂಖ್ಯೆ ಕಡಿಮೆಗೊಳಿಸಬೇಕು ಎಂದು ಹೇಳಿದರು.

ಪರೀಕ್ಷೆ, ಲಸಿಕೆ ಹೆಚ್ಚಿಸಬೇಕು: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದ ಹೇಮಲತಾ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವ್ ದರದ ಪ್ರಮಾಣ ಶೇ. 0.59 ದಾಖಲಾಗಿದ್ದು, ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಆದರೂ ಕೋವಿಡ್ ಪರೀಕ್ಷೆ ನಡೆಸುವುದನ್ನು ಮುಂದುವರಿಸಬೇಕು ಹಾಗೂ ಲಸಿಕೆ ನೀಡುವುದನ್ನು ಹೆಚ್ಚಿಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾಡಳಿತದಿಂದ ಈಗಾಗಲೇ ಹಲವು ಬಾರಿ ವಿಶೇಷ ಲಸಿಕಾ ಮೇಳ ಆಯೋಜಿಸುವ ಮೂಲಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳಿಗೆ ನೀಡಲಾಗುತ್ತಿರುವ ರೋಗ ನಿರೋಧಕ ಚುಚ್ಚುಮದ್ದುಗಳನ್ನು ನೀಡುವ ಗುರಿಯನ್ನು ಶೇ.100 ಸಾಧಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಸಲಹೆ ನೀಡಿದರು.

ಕೈಮಗ್ಗ ಸ್ಥಾಪನೆ ಪರಿಶೀಲನೆ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಣ್ಣ ಉದ್ಯಮ ಹಾಗೂ ಕೈ-ಮಗ್ಗಗಳನ್ನು ಸ್ಥಾಪನೆ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಬೇಕು ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ತ್ರೀ-ಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳ ಸದಸ್ಯರಿಗೆ ವಿವಿಧ ತರಬೇತಿ ನೀಡುವ ಮೂಲಕ ಸ್ವ-ಉದ್ಯೋಗಿಗಳನ್ನಾಗಿ ಮಾಡಬೇಕು ಎಂದರು.