ಜಿಲ್ಲೆ

ಕಾಲಮಿತಿಯೊಳಗೆ ವಿಮಾ ಕಂತು ಪಾವತಿಸಿ

ಗದಗ: ಜಿಲ್ಲೆಯ ರೈತರು ನಿಗದಿತ ಕಾಲಮಿತಿಯೊಳಗೆ ವಿಮಾ ಕಂತು ಪಾವತಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಸಂಸ್ಥೆ ಪ್ರತಿನಿಧಿಗಳು ಸೂಕ್ತ ಮಾಹಿತಿ ನೀಡಿ ರೈತ ಬಾಂಧವರಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿ ಇಲಾಖೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ಕಂತು ಪಾವತಿಸುವ ಮೂಲಕ ವಿಮಾ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಕಂತು ಪಾವತಿಸಲು ಬರುವ ರೈತರಿಂದ ಯಾವುದೇ ಹೆಚ್ಚುವರಿ ಹಣ ವಸೂಲಿ ಮಾಡಬಾರದು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಗದಗ ಜಿಲ್ಲೆಗೆ ಬಜಾಜ್ ಅಲಿಯಾಂಝå್ ಜನರಲ್ ಇನ್ಯೂರೆನ್ಸ್ ಕಂಪನಿ ಲಿಮಿಟೆಡ್ ಮುಂಗಾರು ಹಂಗಾಮಿನ ಬೆಳೆ ವಿಮೆಯ ವಿಮಾ ಸಂಸ್ಥೆಯಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಬ್ಯಾಂಕ್, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಗದಗ ಶಾಖೆಯನ್ನು ಸಂರ್ಪಸಿ ಮಾಹಿತಿ ಪಡೆದು ವಿಮಾ ಕಂತು ಪಾವತಿಸಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 28,0600 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿವರೆಗೆ 13,2,196 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದರು.

ಜಿಲ್ಲೆಯ ಪ್ರಮುಖ ಬೆಳೆಗಳಾದ ಜೋಳ 1,128 ಹೆಕ್ಟೇರ್, 22,439, ಹೆಸರು 75,935, ಶೇಂಗಾ 14,393, ಸೂರ್ಯಕಾಂತಿ 1,831 ಹಾಗೂ ಹತ್ತಿ 12,175 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದರು.

ಮುಂಗಾರು ಹಂಗಾಮಿನ ಬೆಳೆ ವಿಮೆ ಜಾರಿಯಲ್ಲಿದ್ದು, ಇಲ್ಲಿಯವರೆಗೆ 22,451 ರೈತರು ವಿವಿಧ ಬೆಳೆಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಹೆಸರು ಬೆಳೆಗೆ ನೋಂದಾಯಿಸಲು ಜುಲೈ 15, ಶೇಂಗಾ, ಮುಸುಕಿನ ಜೋಳ, ಜೋಳ, ತೊಗರಿ, ಹತ್ತಿ, ಸಜ್ಜೆ, ಎಳ್ಳು, ಹುರುಳಿ ಹಾಗೂ ನವಣಿ ಬೆಳೆಗಳಿಗೆ ಜುಲೈ 31 ಹಾಗೂ ಸೂರ್ಯಕಾಂತಿ ಬೆಳೆಗೆ ಆಗಸ್ಟ್ 14 ಕೊನೆಯ ದಿನವಾಗಿದೆ ಎಂದು ರುದ್ರೇಶಪ್ಪ ಮಾಹಿತಿ ನೀಡಿದರು.

ಉಪ ಕೃಷಿ ನಿರ್ದೇಶಕರಾದ ವೀರೇಶ ಹುನಗುಂದ, ಮೋಹನ್​ದಾಸ್, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಮುಖ್ಯಸ್ಥ ಪಿ.ಎಂ. ಶಫೀ, ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ, ಪ್ರಮೋದ ತುಂಬಳ, ಚನ್ನಪ್ಪ ಅಂಗಡಿ, ರವೀಂದ್ರಗೌಡ ಪಾಟೀಲ, ಸಂತೋಷ ಪಟ್ಟದಕಲ್ಲು ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

EndFragment