ಜಿಲ್ಲೆ

ಕಾಲಮಿತಿಯೊಳಗೆ ನೌಕರರ ಸಮಸ್ಯೆ ಬಗೆಹರಿಸಿ

ಹಾಸನ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಕುಂದು ಕೊರತೆಗಳನ್ನು ಬಗೆಹರಿಸಿ ಅವರ ಏಳಿಗೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಕುಂದು ಕೊರತೆ ನಿವಾರಣೆ ಸಂಬಂಧ ಸೋಮವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಕರೊನಾದಿಂದ ಮೃತಪಟ್ಟ ನೌಕರರ ಮಾಹಿತಿಯನ್ನು ಸಂಗ್ರಹಿಸಿ, ಮೃತರ ಕುಟುಂಬಕ್ಕೆ ಪರಿಹಾರ ಧನ ತಲುಪಿಸಲು ಕ್ರಮವಹಿಸಿ. ಸರ್ಕಾರಿ ನೌಕರರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲಾಗುವುದು. ನೌಕರರು ಸದಾ ಕ್ರಿಯಾಶೀಲವಾಗಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಮಾತನಾಡಿ, ಸರ್ಕಾರಿ ನೌಕರರ ಸಂಘವು ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಎಲ್ಲ ಕಾರ್ಯಕ್ರಮಗಳಿಗೂ ಸಹಕಾರ ನೀಡುತ್ತಿರುವುದು ಅಭಿನಂದನಾರ್ಹ ಎಂದರು.


ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಎಲ್ಲ ಇಲಾಖೆಯ ನೌಕರರ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಸರ್ಕಾರಿ ನೌಕರರ ಸಂಘಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.


ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿಎಚ್‌ಒ ಡಾ.ಶಿವಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಗೌರವ ಅಧ್ಯಕ್ಷ ತಮ್ಮಣ್ಣಗೌಡ, ರಾಜ್ಯ ಪರಿಷತ್ ಪ್ರತಿನಿಧಿ ಪ್ರದೀಪ್ ಕುಮಾರ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ರಘು, ಡಾ.ಲಕ್ಷ್ಮೀಕಾಂತ್, ವಿವಿಧ ತಾಲೂಕುಗಳ ಅಧ್ಯಕ್ಷರಾದ ಕುಮಾರಸ್ವಾಮಿ, ನಯನಾ, ವೆಂಕಟೇಶ, ಲಕ್ಷ್ಮೀನಾರಾಯಣ್, ಕೃಷ್ಣಮೂರ್ತಿ ಹಾಜರಿದ್ದರು.