ಜಿಲ್ಲೆ

ಕಾಲಮಿತಿಯೊಳಗೆ ಗುಣಮಟ್ಟದ ಕೆಲಸ ಮಾಡಿ

ಶಹಾಪುರ: ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಕಾಲಮಿತಿಯೊಳಗೆ ಗುಣಮಟ್ಟದ ಕೆಲಸ ಮಾಡಬೇಕು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಪಟ್ಟಣದಲ್ಲಿ ಶನಿವಾರ ವಿವಿಧ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪಟ್ಟಣದ ಪದವಿ ಕಾಲೇಜು ಮೈದಾನದ ಬಳಿ 3.8 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಐಟಿಐ ಕಾಲೇಜಿನ ಕಟ್ಟಡದ ಕಾಮಗಾರಿ ಪರಿಶೀಲಿಸಿದರು. ಗುಣಮಟ್ಟದ ಕೆಲಸ ಮಾಡುವುದರ ಜತೆಗೆ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ದಂಡಾಧಿಕಾರಿ ಉಮಾಕಾಂತ ಹಳ್ಳೆ, ಗುತ್ತಿಗೆದಾರ ಎನ್.ಎಸ್.ಪಾಟೀಲ್ ಇದ್ದರು.

ಕಾಲೇಜಿಗೆ ಭೇಟಿ: ಇಲ್ಲಿನ ಸಿಪಿಎಸ್ ಶಾಲಾ ಮೈದಾನದಲ್ಲಿರುವ ಬಾಲಕಿಯರ ಪ್ರೌಢಶಾಲೆ ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸಚಿವ ದರ್ಶನಾಪುರ ಭೇಟಿ ನೀಡಿ ಶಾಲಾ ಕೋಣೆಗಳನ್ನು ವೀಕ್ಷಿಸಿದರು. ಎರಡು ಶಾಲಾ ಕೋಣೆ ನೆಲಸಮವಾಗುವ ಹಂತಕ್ಕೆ ತಲುಪಿದ್ದು, ಈ ಕೂಡಲೇ ಅವುಗಳನ್ನು ಡೆಮಾಲಿಸ್ ಮಾಡಿ ಹೊಸ ಕಟ್ಟಡ ನಿರ್ಮಿಸಲು ಸೂಚಿಸಿದರು. ಸ್ಥಳದ ಅಭಾವದ ಹಿನ್ನಲೆಯಲ್ಲಿ ಕಟ್ಟಡದ ಮೇಲೆ ಕೋಣೆಗಳನ್ನು ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಭರವಸೆ ಸಚಿವರು ನೀಡಿದರು. ಮುಖ್ಯ ಗುರುಗಳಾದ ಯಂಕೋಬ್ ಇತರರಿದ್ದರು.

ಇದಾದ ನಂತರ ಕಾಲೇಜು ಮೈದಾನಕ್ಕೆ ಭೇಟಿ ನೀಡಿ, ಅಲ್ಲಿನ ವಿಐಪಿ ಗ್ಯಾಲರಿ ನಿರ್ಮಾಣದ ಕಾಮಗಾರಿ ಪರಿಶೀಲಿಸಿದರು. 2 ಕೋಟಿ ರೂ. ವೆಚ್ಚದಲ್ಲಿ ಈ ಕೆಲಸ ಕೈಗೊಳ್ಳಲಾಗುತ್ತಿದೆ. 80 ಲಕ್ಷ ರೂ. ವೆಚ್ಚದಲ್ಲಿ ಒಳಾಂಗಣದಲ್ಲಿ ಚರಂಡಿ ಕಾಮಗಾರಿ ನಡೆದಿದೆ. 14 ಲಕ್ಷ ರೂ. ವೆಚ್ಚದಲ್ಲಿ ಟೆನ್ನಿಸ್ ಹಾಲ್ ಮ್ಯಾಟ್ ಅಳವಡಿಸಲು ಅನುದಾನ ನೀಡಲಾಗದೆ. ಅಲ್ಲದೆ 6 ಎಲ್‌ಇಡಿ ಲೈಟ್‌ಗಳ ವ್ಯವಸ್ಥೆ ಕಲ್ಪಿಸಿಲಾಗುವುದು ಎಂದು ಹೇಳಿದರು. ನಿರ್ಮಿತಿ ಕೇಂದ್ರದ ಜೆಇ ರಾಮಣ್ಣ ಗೌಡ ಪಾಟೀಲ್ ಇದ್ದರು.

ಪದವಿ ಕಾಲೇಜು ಆವರಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಚಿವ ಶರಣಬಸಪ್ಪ ಸ್ಥಳ ಪರಿಶೀಲನೆ ಮಾಡಿದರು. ಸ್ಥಳ ಸ್ವಾಧಿನಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾಗಿ ತಹಸೀಲ್ದಾರ್ ಉಮಾಕಾಂತ ಹಳ್ಳೆ ಸಚಿವರ ಗಮನಕ್ಕೆ ತಂದರು.