ಬೀದರ್: ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ವತಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ಉದಾಸೀನತೆ ತೋರಿದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಿ, ಕ್ರಮ ಜರುಗಿಸುವುದಾಗಿ ಮಂಡಳಿ ಅಧ್ಯಕ್ಷರಾದ ಕಲಬುರಗಿ ಉತ್ತರ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಮಂಡಳಿಯಿಂದ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಕಾಮಗಾರಿಗಳಿಗೆ ಅನುಷ್ಠಾನಾಧಿಕಾರಿಗಳು ಕೂಡಲೇ ವೇಗ ನೀಡಬೇಕು. ರಾಜ್ಯ ಸರ್ಕಾರ ಹಿಂದಿನ ಅವಧಿಗಿಂತಲೂ ಪ್ರಸಕ್ತ ಹೆಚ್ಚಿನ ಅನುದಾನವು ಮಂಡಳಿಗೆ ಒದಗಿಸಿದೆ. ಇದರ ಸಮರ್ಪಕ ಬಳಕೆಗೆ ಒತ್ತು ನೀಡುವಂತೆ ಸೂಚಿಸಿದರು.
ಸಮಗ್ರ ಅಭಿವೃದ್ಧಿಯಿಂದಲೇ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಹೆಸರಿಟ್ಟಿರುವುದಕ್ಕೆ ಮಹತ್ವ ಬರುತ್ತದೆ. ಮಂಡಳಿಯಲ್ಲಿ ಹಣಕಾಸಿನ ತೊಂದರೆ ಇಲ್ಲ. ಮಂಡಳಿ ನಿಗದಿಪಡಿಸಿದ ಅವಧಿಯಲ್ಲಿ ಕೆಲಸ ಆಗಬೇಕು. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಥಮಾದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.
2018-19ನೇ ಸಾಲಿನ ಎಲ್ಲ ಮಂಡಳಿ ಬಾಕಿ ಕಾಮಗಾರಿ ಬರುವ ಮಾರ್ಚ್ ನೊಳಗೆ ಮುಗಿಯಬೇಕು. 2019-20ನೇ ಸಾಲಿನಲ್ಲಿ ತೆಗೆದುಕೊಂಡ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕೆಂದು ಸೂಚಿಸಿದರು. ಸಭೆಯಲ್ಲಿ 2013-14ನೇ ಸಾಲಿನಿಂದ 2019-20ನೇ ಸಾಲಿನವರೆಗೆ ವಿವಿಧ ಇಲಾಖೆಗಳಿಂದ ಚಾಲ್ತಿಯಲ್ಲಿರುವ ಮತ್ತು ಬಾಕಿ ಇರುವ ಕಾಮಗಾರಿಗಳ ಪ್ರಗತಿ ಬಗ್ಗೆ ಚರ್ಚೆ ನಡೆಯಿತು.
ಸಂಸದ ಭಗವಂತ ಖೂಬಾ ಮಾತನಾಡಿ, ಬಾಕಿ ಉಳಿದಿರುವ ಬೀದರ್ ನಗರದ ಸಿಕೊಂಡ ರಿಂಗ್ ರೋಡ್ ಕಾಮಗಾರಿ ಮುಗಿಸಿದಲ್ಲಿ ಜಿಲ್ಲೆ ಅಭಿವೃದ್ಧಿಗೆ ಪೂರಕವಾಗಲಿದೆ. ಇದಕ್ಕೆ ಅಗತ್ಯ ಅನುದಾನ ಒದಗಿಸಿ ಕಾಮಗಾರಿ ಆರಂಭಿಸುವಂತೆ ಕೋರಿದರು. ಶಾಸಕ ರಹೀಮ್ ಖಾನ್ ಅವರು ಸಹ ಅಪೂರ್ಣ ರಿಂಗ್ ರೋಡ್ ಕಾಮಗಾರಿ ಆದ್ಯತೆ ಮೇಲೆ ಪೂರ್ಣಗೊಳಿಸಲು ಆಗ್ರಹಿಸಿದರು. ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ಮಂಡಳಿ ಅನುದಾನ ಜಿಲ್ಲೆಯ ಎಲ್ಲ ಕಡೆಗೆ ಸಮರ್ಪಕ ಹಂಚಿಕೆ ಮಾಡಿ ಎಂದು ಸಲಹೆ ನೀಡಿದರು.
ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಪ್ರಾದೇಶಿಕ ಆಯುಕ್ತರಾದ ಮಂಡಳಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್, ಡಿಸಿ ರಾಮಚಂದ್ರನ್, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಡಿಸಿ ರುದ್ರೇಶ ಘಾಳಿ, ಎಸಿ ಗರೀಮಾ ಪನ್ವಾರ್, ಭುವನೇಶ ಪಾಟೀಲ್, ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ, ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಪಿಆರ್ ಇ ವೈಫಲ್ಯತೆ ಅನಾವರಣ
ಪಂಚಾಯತ್ ರಾಜ್ ಇಂಜಿನಿಯರಿಂಗ್(ಪಿಆರ್ ಇ) ವಿಭಾಗದ ಅಧಿಕಾರಿಗಳು ಕೆಕೆಆರ್ ಡಿಬಿ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಅಂಶ ಸಭೆಯಲ್ಲಿ ಬಯಲಾಯಿತು. ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಸಭೆಯಲ್ಲಿ ಈ ವಿಷಯ ಖಾರವಾಗಿಯೇ ಪ್ರಸ್ತಾಪಿಸಿ, ಪಿಆರ್ ಇ ವಿಭಾಗದವರ ಕಾರ್ಯವೈಖರಿ ಬಿಚ್ಚಿಟ್ಟರು. ಸತತ ವಿಡಿಯೋ ಕಾನ್ಫರೆನ್ಸ್ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರೂ ಅನುಷ್ಠಾನಾಧಿಕಾರಿಗಳು ಕಾಮಗಾರಿ ಅನುಷ್ಠಾನಕ್ಕೆ ಒತ್ತು ಕೊಡದಿದ್ದರೆ ಹೇಗೆ ಎಂದು ಡಿಸಿ ಪ್ರಶ್ನಿಸಿದರು. 2017-18ರಲ್ಲಿಯ ಬಾಕಿ ಇರುವ 6 ಕಾಮಗಾರಿಗಳನ್ನು ಮಾರ್ಚ್ ದೊಳಗೆ ಪೂರ್ಣಗೊಳಿಸಬೇಕೆಂದು ಕೆಆರ್ ಐಡಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಂಡಳಿ ಅಧ್ಯಕ್ಷ ದತ್ತಾತ್ರೇಯ ಅವರೂ ಪಿಆರ್ ಇ ವಿಭಾಗದ ವಿರುದ್ಧ ಹರಿಹಾಯ್ದರು. ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ಬಾಕಿ ಇರಿಸಿಕೊಂಡಿರುವುದೇಕೆ ಎಂದು ಪ್ರಶ್ನಿಸಿ ಇಲಾಖೆ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.
ಕಾಲ್ ಸ್ವೀಕರಿಸದಿದ್ದರೆ ಕ್ರಮ
ಜಿಲ್ಲೆಯ ಕೆಲವು ಅಧಿಕಾರಿಗಳು ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಏನಾದರೂ ಚರ್ಚಿಸಬೇಕಾದರೆ ಹೇಗೆ? ಅಧಿಕಾರಿಗಳ ಈ ರೀತಿಯ ಧೋರಣೆಯಿದ್ದರೆ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದತಾತ್ರೇಯ ಪಾಟೀಲ್, ಕರೆ ಸ್ವೀಕರಿಸದ ಮನಸ್ಥಿತಿ ಮುಂದುವರೆದರೆ ಅಂಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿದ್ದು ಕೆಲಸ ನಡೆಸುವ ಅಸಮರ್ಪಕ ಕಾರ್ಯವೈಖರಿ ಬಿಟ್ಟು, ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುವಂತೆ ತಾಕೀತು ಮಾಡಿದರು.
ಕೋವಿಡ್ ಕಷ್ಟದಲ್ಲಿ ಕೊಟ್ಟ
ಅನುದಾನ ಸಹ ಬಳಸಿಲ್ಲ!
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಮಂಡಳಿಯಿಂದ ಜಿಲ್ಲೆಯ ಆಸ್ಪತ್ರೆಗಳಿಗೆ ನೀಡಿರುವ ಅನುದಾನ ಸಹ ಬಳಸದಿರುವುದು ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಅವರಿಗೆ ಕೆರಳಿಸಿತು. ಕರೊನಾ ವೇಳೆ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಈ ವೇಳೆ ಕೊಟ್ಟ ಅನುದಾನವೂ ಬಳಸಿಕೊಳ್ಳದಿದ್ದರೆ ಹೇಗೆ ಎಂದು ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕೆಆರ್ ಐಡಿಎಲ್ ನವರು 2016-17ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿದ ಅವರು, ಮುಂದಿನ ಸಭೆಯ ಅವಧಿಯೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಅಭಿಯಂತರರಿಗೆ ಗಡುವು ವಿಧಿಸಿದರು.
ರಿಂಗ್ ರೋಡ್ ಸ್ಥಳಕ್ಕೆ ಭೇಟಿ
ಅಲಿಯಾಬಾದ್ ನಿಂದ ಚಿಕ್ ಪೇಟ್ ಗೆ ಸೇರುವ ಬೀದರ್ ರಿಂಗ್ ರೋಡ್ ಬಾಕಿ ಉಳಿದ ಕಾಮಗಾರಿಗೆ 15 ಕೋಟಿ ರೂ. ಅನುದಾನ ಒದಗಿಸಬೇಕೆಂದು ಸ್ಥಳೀಯ ಸಂಸದ ಭಗವಂತ ಖೂಬಾ, ಶಾಸಕ ರಹೀಮ್ ಖಾನ್ ಅವರು ದತ್ತಾತ್ರೇಯ ರೇವೂರ ಅವರಲ್ಲಿ ಬೇಡಿಕೆ ಮಂಡಿಸಿದರು. ಸಭೆಯಲ್ಲಿ ಈ ಸಂಬಂಧ ಶಾಸಕ ಖಾನ್ ಅವರು ರೇವೂರ ಅವರಿಗೆ ಮನವಿಪತ್ರ ಸಹ ಸಲ್ಲಿಸಿದರು. ನಗರದಲ್ಲಿ ಸಂಚಾರ ದಟ್ಟಣೆ ಕಮ್ಮಿ ಮಾಡುವ ಜತೆಗೆ ಅಭಿವೃದ್ಧಿಗೆ ಪೂರಕವಾಗಿರುವ ಈ ಕೆಲಸಕ್ಕೆ ಮಂಡಳಿ ಅನುದಾನ ಒದಗಿಸಿ ಅಪೂರ್ಣ ರಿಂಗ್ ರೋಡ್ ಮುಗಿಸುವಂತೆ ಕೋರಿದರು. ಬೇಡಿಕೆಗೆ ಸ್ಪಂದಿಸಿದ ರೇವೂರ ಅವರು, ಸಭೆ ನಂತರ ರಿಂಗ್ ರೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನುಕೂಲ ಆಗಬೇಕು ಹಾಗೂ ಹಿಂದುಳಿದ ಹಣೆಪಟ್ಟಿ ಕಿತ್ತು ಹಾಕಬೇಕು ಎನ್ನುವ ಮಂಡಳಿ ಸ್ಥಾಪನೆ ಆಶಯವನ್ನು ಈ ಭಾಗದ ಅಧಿಕಾರಿಗಳೆಲ್ಲರೂ ಅರಿತು ಅನುದಾನದ ಬಳಕೆಗೆ ಗಮನ ಕೊಡಬೇಕು. ಎಲ್ಲರ ಸಹಕಾರ ಹಾಗೂ ಸಮನ್ವಯತೆ ಮೂಲಕ ಬದಲಾವಣೆ ತರಬಹುದು. ಅಭಿವೃದ್ಧಿ ಕೆಲಸದಲ್ಲಿ ನಿರ್ಲಕ್ಷೃ ವಹಿಸಿದರೆ ಕ್ರಮ ಅನಿವಾರ್ಯ.| ದತ್ತಾತ್ರೇಯ ಪಾಟೀಲ್ ರೇವೂರಕೆಕೆಆರ್ ಡಿಬಿ ಅಧ್ಯಕ್ಷ