ನಂಜನಗೂಡು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಆಯೋಗದ ಶಿಫಾರಸಿನ ಮೇರೆಗೆ ಪರಿಶಿಷ್ಟ ಜಾತಿ ಮತ್ತು ಉಪಜಾತಿಗಳ ಸಮಿತಿ-2025 ಸಮೀಕ್ಷೆಯನ್ನು ತಾಲೂಕಿನ ಎಲ್ಲ ಅಧಿಕಾರಿಗಳು ನಿಮಗೆ ಕೊಟ್ಟಿರುವ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರು ತಿಳಿಸಿದರು.
ಪಟ್ಟಣದ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಂಜನಗೂಡು ತಾಲೂಕಿನ 400ಕ್ಕೂ ಹೆಚ್ಚು ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈಗಾಗಲೇ ಮೈಸೂರಿನಲ್ಲಿ ಸಮೀಕ್ಷೆ ಬಗ್ಗೆ ಆರು ಅಧಿಕಾರಿಗಳು ತರಬೇತಿ ಪಡೆದು ಇಂದು ಮಾಹಿತಿ ನೀಡಲು ಬಂದಿದ್ದಾರೆ. ಮೇ 5 ರಿಂದ 17ರವರೆಗೆ ಪರಿಶಿಷ್ಟ ಜಾತಿ ಮತ್ತು ಉಪ ಜಾತಿಯ ಕುಟುಂಬಗಳ ಸಮೀಕ್ಷೆಯನ್ನು 3 ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಗಣತಿ ನಡೆಯಲಿದೆ. ಗಣತಿಯ ಮೂಲಕ ಉಪಜಾತಿ, ಜನಸಂಖ್ಯೆ, ಆರ್ಥಿಕ ಸ್ಥಿತಿಗತಿ, ಉದ್ಯೋಗ, ಭೂ ಮಾಲೀಕತ್ವ ಮಾಹಿತಿಗಳನ್ನು ಕಲೆ ಹಾಕಬೇಕು. ಎರಡನೇಯ ಸಮೀಕ್ಷೆಯು 19ರಿಂದ 21ರವರೆಗೆ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಆನ್‌ಲೈನ್ ಮೂಲಕ ಮೂರನೇ ಹಂತದಲ್ಲಿ ಸ್ವಯಂ ಜಾತಿಯ ಬಗ್ಗೆ ಘೋಷಣೆ ಮಾಡಬೇಕು ಎಂದರು.
ಅಧಿಕಾರಿಗಳು ಕಡ್ಡಾಯವಾಗಿ ಆಯಾ ಗ್ರಾಮಗಳ ಪರಿಶಿಷ್ಟ ಜನಾಂಗಗಳ ಮನೆ ಮನೆಗೆ ತೆರಳಿ ಕ್ರಮಬದ್ಧವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ಕಾಲಮಿತಿ ಒಳಗೆ ಸಮೀಕ್ಷೆಯನ್ನು ಮುಗಿಸುವಂತೆ ಸೂಚಿಸಿದರು.
ತರಬೇತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು, ತರಬೇತಿ ಅಧಿಕಾರಿಗಳಾದ ವಿಶ್ವನಾಥ್, ಭಾಸ್ಕರ್, ಚೆಲುವರಾಜು, ಮಹೇಶ್, ವಸಂತ ಕುಮಾರಿ, ಮಹದೇವಪ್ರಸಾದ್, ಕಿರಣ್‌ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.