ಜಿಲ್ಲೆ

ಕಾಲ ಜ್ಞಾನ ಪುಸ್ತಕ ಬಿಡುಗಡೆ ಮಾಡಿದ ರಂಭಾಪುರಿ ಶ್ರೀಗಳು

ಹಾಸನ: ಬಾಳೆಹೊನ್ನೂರು ಶ್ರೀ ರಂಭಾಪುರೀ ಪೀಠದಲ್ಲಿ ಹುಣ್ಣಿಮೆ ಅಂಗವಾಗಿ ಗುರುವಾರ ಪೂರ್ಣಿಮೆಯಂದು ನಡೆದ ಧಾರ್ಮಿಕ ಸಭೆಯಲ್ಲಿ ಕಾಲ ಜ್ಞಾನ ಪುಸ್ತಕವನ್ನು ಶ್ರೀ ರಂಭಾಪುರೀ ಮಠದ ಮಠಾಧೀಶರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಹಿಂದು ಧರ್ಮದ ಉಳಿವಿಗಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಮಠ ಮಾನ್ಯಗಳು ಅನ್ನ ದಾಸೋಹ, ಉಚಿತ ವಸತಿ- ವಿದ್ಯಾಬ್ಯಾಸ, ಧಾರ್ಮಿಕ ಆಚರಣೆಗಳು, ಧರ್ಮಜಾಗೃತಿ ನೀಡುವ ಕೆಲಸ ಮಾಡುತ್ತಿವೆ. ರಂಭಾಪುರಿ ಮಠ ನಿರಂತರವಾಗಿ ಧಾರ್ಮಿಕ ಆಚರಣೆಗಳು, ಧಾರ್ಮಿಕ ವಿಚಾರಗಳಿಂದ ಜನರನ್ನು ಕೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಅಗತ್ಯವಾಗಿದೆ. ಇಂದು ಸೀಗೆ ಹುಣ್ಣಿಮೆ ಅಂಗವಾಗಿ ಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಬೆಳಿಗ್ಗೆಯಿಂದ ನಡೆದಿದೆ. ನಾವು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಸದೃಢ ಸಾಮಾಜಿಕ ಚಿಂತನೆ ಮಾಡುವಂತರಾಗಬೇಕು ಎಂದು ಕರೆ ನೀಡಿದರು.
ಇದೆ ಸಂದರ್ಭದಲ್ಲಿ ಅರಸೀಕೆರೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಡಿ.2ರಂದು ಅರಸೀಕೆರೆಯಲ್ಲಿ ಶ್ರೀ ರಂಭಾಪುರಿ ಶ್ರೀಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನನೀಡಿದರು.
ಕಾರ್ಯಕ್ರಮದಲ್ಲಿ ಯಡಿಯೂರಿನ ಶ್ರೀ ರಂಭಾಪುರಿ ಶಾಖಾ ಮಠದ ಮಠಾಧೀಶರಾದ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು, ಕೆ.ಆರ್. ನಗರ ತಾಲೂಕಿನ ಕರ್ಪೂರಹಳ್ಳಿ ಮಠದ ಮಠಾಧೀಶರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಸನ ತಣ್ಣೀರು ಹಳ್ಳ ಮಠದ ಶ್ರೀ ವೀಜಯ ಕುಮಾರ್ ಸ್ವಾಮೀಜಿ, ಅರಸೀಕೆರೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶಿವಯ್ಯ, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸಮಾಜದ ಮುಖಂಡರಾದ ಅರಸೀಕೆರೆಯ ನಿರ್ವಾಹಣ ಸ್ವಾಮಿ, ಷಡಕ್ಷರಯ್ಯ, ಎಚ್.ಎನ್. ನಾಗೇಶ್, ಸುನೀಲ್ ಶಾಸ್ತ್ರೀ, ಅರಸೀಕೆರೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.