ಜಿಲ್ಲೆ

ಕಾರ್ವಿುಕರಿಗಾಗಿ ಸಿದ್ಧಗೊಳ್ಳುತ್ತಿವೆ ಅಗತ್ಯ ವಸ್ತು ಕಿಟ್

ಶಿರಸಿ: ಕರೊನಾ ಲಾಕ್​ಡೌನ್ ಕಾರಣಕ್ಕೆ ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ವಿುಕರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲು ಕಾರ್ವಿುಕ ಇಲಾಖೆ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ಪೂರೈಸಲು ಶಿರಸಿಯಲ್ಲಿ ಕಿಟ್ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.

ಕಾರ್ವಿುಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಅವರ ತವರು ಜಿಲ್ಲೆ ಉತ್ತರ ಕನ್ನಡದ ಶಿರಸಿಯಲ್ಲಿ ಕಾರ್ವಿುಕ ಇಲಾಖೆಯಡಿ ನೋಂದಣಿಯಾದ ಕಾರ್ವಿುಕರಿಗೆ ವಿತರಿಸಲು ಬರೋಬ್ಬರಿ 65 ಸಾವಿರ ಕಿಟ್​ಗಳು ಸಿದ್ಧಗೊಳ್ಳುತ್ತಿವೆ. ಇಲ್ಲಿನ ಬೃಹತ್ ಸಂಸ್ಥೆ ಟಿಎಸ್​ಎಸ್, ಕಿಟ್ ಸಿದ್ಧಪಡಿಸುವ ಜವಾಬ್ದಾರಿ ನಿರ್ವಹಿಸುತ್ತಿದೆ. ನೂರಾರು ನೌಕರರು ಈ ಕಾರ್ಯದಲ್ಲಿ ತೊಡಗಿದ್ದು, ದಿನಕ್ಕೆ 3ರಿಂದ 4 ಸಾವಿರ ಕಿಟ್ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ 35ರಿಂದ 40 ಸಾವಿರ ಕಿಟ್​ಗಳು ಸಿದ್ಧಗೊಂಡಿವೆ.

ಉತ್ತರ ಕರ್ನಾಟಕ ಭಾಗದ ದಾವಣಗೆರೆ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ, ಉತ್ತರ ಕನ್ನಡ ಜಿಲ್ಲೆಗಳ ನೋಂದಾಯಿತ ಕಾರ್ವಿುಕರಿಗೆ ಇಲಾಖೆ ವತಿಯಿಂದ ಇಲ್ಲಿ ಸಿದ್ಧಗೊಳ್ಳುವ ಕಿಟ್ ನೀಡಲಾಗುತ್ತದೆ. ಅಕ್ಕಿ 5 ಕೆ.ಜಿ., ಗೋಧಿ ಹಿಟ್ಟು 3 ಕೆ.ಜಿ., ರವಾ, ಉಪ್ಪು, ಸಕ್ಕರೆ, ಅವಲಕ್ಕಿ, ತೊಗರಿಬೇಳೆ ತಲಾ 1 ಕೆ.ಜಿ., ಅಡುಗೆ ಎಣ್ಣೆ 1 ಲೀಟರ್, ಸಾಂಬಾರಪುಡಿ, ರಸಂ ಪುಡಿ, ಮೆಣಸಿನ ಪುಡಿ ತಲಾ 250 ಗ್ರಾಂ, 1 ಸೋಪು ಈ ಕಿಟ್ ಒಳಗೊಂಡಿದೆ. ಇದರ ಮೊತ್ತ 750 ರೂಪಾಯಿ ಆಗಿದೆ.

ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ವಾರದಿಂದೀಚೆಗೆ ಅಗತ್ಯ ವಸ್ತುಗಳ ಕಿಟ್ ಸಿದ್ಧತೆ ಭರದಿಂದ ಸಾಗಿದೆ. ಸಿದ್ಧಗೊಂಡ ಕಿಟ್​ಗಳನ್ನು ರವಾನಿಸುವ ಕಾರ್ಯ ನಡೆದಿದೆ. ಪ್ರಸ್ತುತ ಎರಡು ಜಿಲ್ಲೆಗಳಿಗೆ ಕಿಟ್​ಗಳನ್ನು ವಾಹನಗಳ ಮೂಲಕ ರವಾನಿಸಲಾಗಿದ್ದು, ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲಿ ಕಿಟ್ ತಲುಪಿಸಲು ಇಲಾಖೆ ಮುಂದಾಗಿದೆ.

ಇಲಾಖೆ ಸೂಚನೆ ಮೇರೆಗೆ ಅಗತ್ಯ ವಸ್ತುಗಳ ಕಿಟ್ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಶೇ. 60ಕ್ಕೂ ಹೆಚ್ಚು ಕಿಟ್​ಗಳು ಸಿದ್ಧಗೊಂಡಿವೆ. ಉಳಿದವುಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ. | ಬಿ.ಎಸ್. ಬೆಟಗೇರಿ ಕಾರ್ವಿುಕ ಇಲಾಖೆ ಅಧಿಕಾರಿ
ಕರೊನಾ ಕಾರಣ ಕಾರ್ವಿುಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದರೆ, ಅವರ ಜತೆಗೆ ಇಲಾಖೆಯಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬಲು ಅಗತ್ಯ ವಸ್ತುಗಳ ಕಿಟ್​ಗಳನ್ನು ವಿತರಿಸಲು ಇಲಾಖೆ ಕ್ರಮವಹಿಸಿದೆ. ಈಗಾಗಲೇ ರಾಜ್ಯದ ವಿವಿಧೆಡೆ ಕಿಟ್ ನೀಡಲಾಗಿದೆ. ಬಾಕಿಯಿರುವ ಕಿಟ್​ಗಳು ಸಿದ್ಧಗೊಳ್ಳುತ್ತಿದ್ದು, ಈ ಕಿಟ್​ಗಳನ್ನು ನೋಂದಾಯಿತ ಕಾರ್ವಿುಕರ ಕುಟುಂಬಕ್ಕೆ ವಿತರಿಸಲಾಗುವುದು. ಶಿವರಾಮ ಹೆಬ್ಬಾರ ಕಾರ್ವಿುಕ ಇಲಾಖೆ ಸಚಿವ