ಜಿಲ್ಲೆ

ಕಾರ್ವಿುಕರ ವಜಾ, ವರ್ಗಾವಣೆ ನಿಲ್ಲಿಸಿ

ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಹುಬ್ಬಳ್ಳಿ ಮತ್ತು ನವಲಗುಂದ ಹಮಾಲಿ ಕಾರ್ವಿುಕರು, ಬಿಸಿಯೂಟ, ಅಂಗನವಾಡಿ, ಗ್ರಾ.ಪಂ. ಹಾಗೂ ಕೃಷಿ ವಿಶ್ವವಿದ್ಯಾಲಯ, ಜಲಮಂಡಳಿ ಗುತ್ತಿಗೆ ನೌಕರರು ಸೇರಿದಂತೆ ನೂರಾರು ಕಾರ್ವಿುಕರು ಪ್ರತಿಭಟನೆಗೆ ಸಾಥ್ ನೀಡಿದರು.

ಕೋವಿಡ್ ಲಾಕ್​ಡೌನ್, ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ವಿುಕರ ವಜಾ, ವರ್ಗಾವಣೆ, ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್​ಟಿ ಪಾಲು ಮತ್ತು ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರು, ಕೃಷಿ ಕೂಲಿ ಕಾರ್ವಿುಕರು ಹಾಗೂ ಹಮಾಲಿಗಳನ್ನು ಕಾಪೋರೇಟ್ ಹಿಡಿತಕ್ಕೆ ಒಪ್ಪಿಸುವ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆಯನ್ನು ಕೈ ಬಿಡಬೇಕು. ವೈದ್ಯರು, ಶುಶ್ರೂಷಕಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಗ್ರಾ.ಪಂ. ನೌಕರರು, ಪೊಲೀಸ್ ಮತ್ತು ಸಾರಿಗೆ ಸಿಬ್ಬಂದಿ, ಅಂಗನವಾಡಿ- ಆಶಾ ಕಾರ್ಯಕರ್ತೆಯರು, ಪೌರ ಕಾರ್ವಿುಕರು, ಇತರ ಫ್ರಂಟ್​ಲೈನ್ ಕೆಲಸಗಾರರಿಗೆ ಪಿಪಿಇ ಕಿಟ್​ಗಳು, ಆರೋಗ್ಯ ವಿಮೆ, ಪ್ರೋತ್ಸಾಹಧನ, ಉಚಿತ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡಬೇಕು. ಬಿಸಿಯೂಟ ನೌಕರರಿಗೆ ಕೂಡಲೆ ಗೌರವಧನ ಪಾವತಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಬಿ.ಐ. ಈಳಿಗೇರ, ಕೆ.ಎಚ್. ಪಾಟೀಲ, ಲಲಿತಾ ಹಿರೇಮಠ, ಬಸವಣ್ಣೆಪ್ಪ ನೀರಲಗಿ, ಕತಾಲಸಾಬ ಮುಲ್ಲಾ, ಲಲಿತಾ ಹಿರೇಮಠ, ಚನ್ನಮ್ಮ ಡೊಳ್ಳಿನ, ಮಂಜುನಾಥ ದೊಡ್ಡಮನಿ, ಎ.ಎಂ. ಖಾನ, ಉದಯ ಗದಗಕರ್, ಅಂಜನಾ ಬಡಿಗೇರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.