ಜಿಲ್ಲೆ

ಕಾರ್ಯಾಗಾರಗಳಿಂದ ಜ್ಞಾನದ ಉನ್ನತಿಕರಣ

ತುಮಕೂರು: ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಉತ್ತಮ ಕಾರ್ಯತತ್ಪರತೆಯ ಪರಿಸ್ಥಿತಿ ಅನಾವರಣ ಗೊಳಿಸುವುದು, ವೃತ್ತೀಜಿವನದ ನಿರಂತರ ಜ್ಞಾನದ ಉನ್ನತಿಕರಣ, ಮಾಹಿತಿ ಮತ್ತು ಆಲೋಚನೆಗಳು, ಜ್ಞಾನ, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ಕಲಿಕೆಗೆ ಕಾರ್ಯಾಗಾರ ಅನುಕೂಲವಾಗುತ್ತವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ. ಲಿಂಗೇಗೌಡ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ವೈದ್ಯಕಿಯ ಕಾಲೇಜಿನ ನಾಗಾರ್ಜುನ ಸಭಾಂಗಣದಲ್ಲಿ ಕರ್ನಾಟಕ ಅಲೈಡ್​& ಹೆಲ್ತ್​ಕೇರ್​ ಪ್ರೊಫೆಷನಲ್ಸ್​ ಅಸೋಸಿಯೇಷನ್​ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕಿಯ ತ್ಯಾಜ್ಯ ನಿರ್ವಹಣೆ, ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಪರಿಸರಕ್ಕೆ ಸುರಕ್ಷತೆ ಕಾಪಾಡಿಕೊಳ್ಳಲು ಅನುಸರಿಸಬೇಕಾದ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸುವುದು ಸೋಂಕುಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಕೈಗೊಳ್ಳಬೇಕಾದ ಮಾಗೋರ್ಪಾಯಗಳ ಕುರಿತು ಕಾರ್ಯಾಗಾರದಲ್ಲಿ ತಿಳಿಸಲಾಯಿತು.

ಸಾಹೇ ರಿಜಿಸ್ಟ್ರಾರ್​ ಡಾ.ಅಶೋಕ್​ ಮೆಹ್ತಾ ಮಾತನಾಡಿ, ಆಸ್ಪತ್ರೆಯ ವ್ಯವಸ್ಥೆಯಲ್ಲಿ, ಪ್ರಯೋಗಾಲಯದಲ್ಲಿ ಗುಣಮಟ್ಟ ನಿಯಂತ್ರಣ, ವಿಶ್ವಾಸಾರ್ಹ ಮತ್ತು ಸಕಾಲಿಕ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳುವುದು ವೈದ್ಯಕಿಯ ಕ್ಷೇತ್ರದ ವೃತ್ತಿಪರ ಕಾರ್ಯಕರ್ತರ ಮೇಲೆ ಕೇಂದ್ರೀಕರಿಸುತ್ತದೆ. ರೋಗಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು ಎಂದರು.ಶ್ರೀ ಸಿದ್ಧಾರ್ಥ ವೈದ್ಯಕಿಯ ಕಾಲೇಜಿನ ಉಪಪ್ರಾಂಶುಪಾಲ ಡಾ.ಪ್ರಭಾಕರ್​ ಮಾತನಾಡಿ, ಅಲೈಡ್​ ಹೆಲ್ತ್​ ಮತ್ತು ಹೆಲ್ತ್​ಕೇರ್​ ಪ್ರೊಫೆಷಿನಲ್ಸ್​ ಸದಸ್ಯರ ವೃತ್ತೀಜಿವನವನ್ನು ಉದ್ದೀಪ ಗೊಳಿಸಲು ಕ್ಲಿನಿಕಲ್​ ಸ್ನೇಹಿ ಶೈಕ್ಷಣಿಕ ಕಾರ್ಯಕ್ರಮ ಅನಾವರಣಗೊಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.

ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಶ್ರೀ ಸಿದ್ಧಾರ್ಥ ವೈದ್ಯಕಿಯ ಕಾಲೇಜು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್​.ಸಿ.ಚಂದ್ರಶೇಖರ್​, ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕಿಯ ತ್ಯಾಜ್ಯ ನಿರ್ವಹಣೆಯು ಹಲವಾರು ಸವಾಲುಗಳನ್ನು ಒಳಗೊಂಡಿದೆ. ತಾಜ್ಯಗಳ ಸಂಗ್ರಹಣೆ, ಪ್ರತ್ಯೇಕತೆ, ಸಂಸ್ಕರಣೆ ಮತ್ತು ವಿಲೇವಾರಿ ಇಂದು ಬಹುದೊಡ್ಡ ಸವಾಲಗಿದೆ. ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಪರಿಸರದ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದರ ಜತೆಗೆ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸುವತ್ತ ಗಮನಹರಿಸಬೇಕು. ಅಲ್ಲದೆ ಸೋಂಕುಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ ರಕ್ಷಿಸಲು ಅನುಸರಿಸಬೇಕಾದ ಕಾರ್ಯತತ್ಪರತೆ ಮತ್ತು ಗುಣ ವಿವರಿಸಿದರು.

ಆಪರೇಷನ್​ ಥಿಯೇಟರ್​ ಮತ್ತು ಅರಿವಳಿಕೆಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್​.ಬಿ.ಗಂಗಾಧರ್​ ಮಾತನಾಡಿ, ವೃತ್ತಿಪರತೆಯಲ್ಲಿ ಪ್ರಗತಿ ಸಾಧಿಸಿಲು ವೃತ್ತಿಪರ-ಆಧಾರಿತ ತರಬೇತಿ, ನಿರಂತರ ಜ್ಞಾನದ ಉನ್ನತಿಕರಣ, ಆಧುನಿಕ್​ ಶಿಕ್ಷಣ ಪದ್ಧತಿಯ ಕಲಿಕೆ, ಕ್ಲಿನಿಕಲ್​ ವಾತಾವರಣಕ್ಕೆ ಒಡ್ಡಿಕೊಳ್ಳುವುದು, ಸಾರ್ವಜನಿಕ ದೃಷ್ಟಿಕೋನವನ್ನು

ಹೆಚ್ಚಿಸಲು ನವೀನ ರೋಗಿಯ ಆರೈಕೆ ವ್ಯವಸ್ಥೆ ಪರಿಚಯಿಸುವ ಮೂಲಕ ಸಾರ್ವಜನಿಕವಾಗಿ ಉತ್ತಮ ಹೆಸರನ್ನು ಗಳಿಸುವಂತೆ ಕರೆ ನೀಡಿದರು.ಕಾರ್ಯಾಗಾರದ ಸಂಯೋಜಕಿ ಡಾ.ವೀಣಾ ಕೃಷ್ಣಮೂರ್ತಿ ಮಾತನಾಡಿ, ಆರೋಗ್ಯ ವೃತ್ತಿಪರರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳನ್ನು ಅನಾವರಣಗೊಳಿಸುವುದು, ನೆಟ್​ವರ್ಕಿಂಗ್​ ಸೆಂಟರ್​ ಮಾಹಿತಿ ಮತ್ತು ಆಲೋಚನೆಗಳು, ಜ್ಞಾನ, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ಬೆಳೆಸಿಕೊಳ್ಳುವಂತೆ ಮಾಡಲು ಈ ಕಾರ್ಯಾಗಾರದ ಹಮ್ಮಿಕೊಳ್ಳಲಾಗಿದೆ ಎಂದರು.ತುಮಕೂರು ನಗರದ ಶ್ರೀದೇವಿ, ಸಿದ್ಧಗಂಗಾ ವೈದ್ಯಕಿಯ ಕಾಲೇಜು ಸೇರಿದಂತೆ ವಿವಿಧ ಕಡೆಯಿಂದ 100ಕ್ಕೂ ಹೆಚ್ಚು ಅಲೈಡ್​&ಹೆಲ್ತ್​ಕೇರ್​ ವಿಭಾಗದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.