ಜಿಲ್ಲೆ

ಕಾರ್ಯಾಗಾರ ವಿರುದ್ದ ರೈತರ ಅಕ್ರೋಶ

ಬಳ್ಳಾರಿ : ತಾಲೂಕಿನ ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಗುರುವಾರ ನಡೆದ ಸಮರ್ಥ್ ಮಿಷನ್ ಅಡಿಯಲ್ಲಿ ಥರ್ಮಲ್ ಪವರ್ ಪ್ಲಾಂಟ್‌ಗಳಲ್ಲಿ ಬಯೋಮಾಸ್ ಬಳಕೆ ಕುರಿತು ರೈತರ ಕಾರ್ಯಾಗಾರ ಅಧಿಕಾರಿಗಳ ಹಾಗೂ ರೈತರ ನಡುವೆ ವಾಕ್ಸಮರ ನಡೆಯಿತು.
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೀವರಾಶಿಯ ಬಳಕೆಯ ರಾಷ್ಟ್ರೀಯ ಮಿಷನ್ ಸದಸ್ಯ ಡಾ.ಜೆ. ಪ್ರಫುಲ್ ಚಂದ್ರ ಡೋಂಗ್ರೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬಳಿಕ ಅಧಿಕಾರಿಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲ್ ಭಾಷಣ ಆರಂಭಿಸಿದ್ದಕ್ಕೆ ರೈತರು ಇಂಗ್ಲಿಷ್ ಮತ್ತು ಹಿಂದಿ ಭಾಷೆ ಅರ್ಥವಾಗುವುದಿಲ್ಲ ಕನ್ನಡದಲ್ಲಿ ಹೇಳಿ ಎಂದು ಅಕ್ಷೇಪ ವ್ಯಕ್ತಪಡಿಸಿದರು. ಕಾರ್ಯಾಗಾರಕ್ಕೆ ಆಗಮಿಸಿದ ಕಾರೇಕಲ್ಲ, ಚಾನಾಳ್, ಕಗ್ಗಲ್, ಜೋಳದರಾಶಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ನೂರಾರು ರೈತರಿಗೆ ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಇರಲಿಲ್ಲ, ಅದಕ್ಕಾಗಿ ರೈತರು ಕಾರ್ಯಾಗಾರ ಬಹಿಷ್ಕಾರ ಮಾಡಿ ಹೊರ ನಡೆದರು.
ತಾಲೂಕಿನ ಕಾರೇಕಲ್ಲು ಗ್ರಾಮದ ರೈತರೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಭೆ ಇದೆ. ಬಹುಮಾನಗಳು ಕೊಡುತ್ತೇವೆ ಎಂದು ಕರೆದು ಗೋಣಿ ಚೀಲ ಕೊಟ್ಟಿದ್ದಾರೆ. ಇದರ ಬದಲು ಒಂದೆರಡು ಎಕರೆಗೆ ಬಿತ್ತನೆ ಬೀಜ ಕೊಟ್ಟರೆ ಅನುಕೂಲ ಆಗುತ್ತದೆ. ತಮ್ಮ ಅನುಕೂಲಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಹಗರಿ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ಬೇಕಾದವರಿಗೆ ಮಾತ್ರ ಬಿತ್ತನೆ ಬೀಜಗಳನ್ನು ನೀಡುತ್ತಾರೆ. ನಿಜವಾದ ರೈತರಿಗೆ ಬಿತ್ತನೆ, ಗೊಬ್ಬರ ವಿತರಿಸುವುದಿಲ್ಲ. ಬೆಳೆಗಳನ್ನು ಬೆಳೆಯಲು ರೈತರಿಗೆ ಯಾವುದೇ ರೀತಿಯ ತರಬೇತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ರವಿಶಂಕರ್, ಎನ್‌ಪಿಟಿಐ ಸಹಾಯಕ ನಿರ್ದೇಶಕ ಡಾ.ವಿ.ಸುರೇಶ್ ಬಾಬು ಇದ್ದರು