ಕುಕನೂರು: ತಾಲೂಕಿನ ಗ್ರಾಮಗಳಿಗೆ ಕುಡಿವ ನೀರಿನ ಸಮಸ್ಯೆಯಾದಂತೆ ಪೂರೈಸುವುದು ಅಧಿಕಾರಿಗಳ ಜವಾಬ್ದಾರಿ. ಅಭಿವೃದ್ಧಿಯತ್ತ ಗಮನ, ಕಾರ್ಯವೈಕರಿ ಒಂದಾದರೆ ಪ್ರಗತಿ ಸಾಧ್ಯ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಕನೂರು ಹೊಬಳಿಯ ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ತಿಂಗಳಿಗೊಮ್ಮೆ ನಡೆಯುವ ದಿಶಾ ಸಭೆಯಲ್ಲಿ ಅಧಿಕಾರಿಗಳು ಶೇ.80 ಪ್ರಗತಿ ತೋರಿಸುತ್ತಿದ್ದರು. ಆದರೆ, ಗ್ರಾಮಕ್ಕೆ ಭೇಟಿ ನೀಡಿದಾಗ ಅಭಿವೃದ್ಧಿ ಕಾರ್ಯಗಳಿಗಾಗಿ ಗ್ರಾಮಸ್ಥರು ಮನವಿ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಎಲ್ಲ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ ಅಧಿಕಾರಿಗಳು, ಎಲ್ಲ ಇಲಾಖೆ ತಾಲೂಕಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿದೆ. ಇದರಿಂದ ಅಧಿಕಾರಿಗಳ ಕಾರ್ಯವೈಖರಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಗ್ರಾಮಸ್ಥರಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜವಾಬ್ದಾರಿಯಿಂದ ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರು. ಕೃಷಿ ಇಲಾಖೆ ಅಡಿಯಲ್ಲಿ ಗೊಬ್ಬರ, ಬಿತ್ತನೆ ಬೀಜ ವಿತರಣೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮಳೆಗಾಲ ಈ ಬಾರಿ ಬೇಗನೆ ಆರಂಭವಾಗಿದ್ದು, ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭಿಸಿ. ತೋಟಗಾರಿಕೆ, ಎನ್‌ಆರ್‌ಎಲ್‌ಎಂ ಇತರ ಸರ್ಕಾರಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನ ಮಾಡಿ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಶ್ರಯ ಇಲ್ಲದವರು ದಾಖಲೆಗಳನ್ನು ನೀಡಬೇಕು. ಹಂತ ಹಂತವಾಗಿ ಮನೆ ಮಂಜೂರು ಮಾಡಲಾಗುವುದು ಎಂದು ಹೇಳಿದರು.
ಈ ಹಿಂದೆ ನೀಡಲಾದ ಆಶ್ರಯ ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ ಎಂದು ಇಟಗಿ ಗ್ರಾಪಂ ಸದಸ್ಯ ಗವಿಸಿದ್ದನಗೌಡ ಮುದ್ದಾಬಳ್ಳಿ ಪ್ರಸ್ತಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಪರಿಹಾರಕ್ಕೆ ಸರ್ಕಾರದ ಹಂತದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದರು. ಕುಕನೂರು ಪಪಂ ಸಮಸ್ಯೆಗಳನ್ನು ತ್ವರಿವಾಗಿ ಪರಿಹರಿಸಲು ಮುಖ್ಯಾಧಿಕಾರಿಗೆ ಸೂಚಿಸಿದರು.
ತಾಪಂ ಇಒ ಸಂತೋಷ ಬಿರಾದರ್ ಪಾಟೀಲ್, ಉಪ ತಹಸೀಲ್ದಾರ್ ಮುರಳೀಧರಾವ್ ಕುಲಕರ್ಣಿ, ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಇದ್ದರು.