ಜಿಲ್ಲೆ

ಕಾರ್ಯಪ್ಪ ಉದ್ಯಾನವನದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಹಾಸನ: ನಗರದ ಕುವೆಂಪು ರಸ್ತೆ ಬಳಿ ಇರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಬುಧವಾರ ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪವನ್ನು ಅರ್ಪಿಸಿ ನಮನ ಸಲ್ಲಿಸಿದರು.

ನಿವೃತ್ತ ಸೇನಾಧಿಕಾರಿ ಸಿ.ಕೆ. ಕಿರಣ್ ಕುಮಾರ್ ಮಾತನಾಡಿ, 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದವರೆಗೆ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು. ಈ ಯುದ್ದದಲ್ಲಿ ಅನೇಕ ವಿರ ಯೋಧರು ಹುತಾತ್ಮರಾದರು. ಪ್ರತಿ ಜುಲೈ 26ರಂದು ಕಾರ್ಗಿಲ್ ವಿಜಯದ ದಿನವಾಗಿ ಆಚರಣೆ ಮಾಡಲಾಗುತ್ತದೆ. ಭಾರತೀಯರಿಗೆ ಇದು ಎಂದೂ ಮರೆಯದ ದಿನವಾಗಿದೆ. ಜಮ್ಮು- ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ ಎಂದರು.

ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು ಎಂದು ಬೇಸರವ್ಯಕ್ತಪಡಿಸಿದರು.

ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡರು ಎಂದು ಹೇಳಿದರು.

ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ ’ಆಪರೇಷನ್ ತಲ್ವಾರ್’ ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನಿಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿದರು ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಯೋಧರ ಸಂಘದ ಅಧ್ಯಕ್ಷರು ವೆಂಕಟೇಶ್, ಕಾರ್ಯದರ್ಶಿ ಪ್ರದೀಪ್ ಸಾಗರ್, ಖಜಾಂಚಿ ಬಾಲಕೃಷ್ಣ, ದೊರೆರಾಜು, ನಿವೃತ್ತ ಯೋಧ ಪುಟ್ಟರಾಜು, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಚ್.ಕೆ. ನಾಗೇಶ್, ಲಯನ್ಸ್ ಕ್ಲಬ್ ಅಂಬಾಸಿಡರ್ ಅಶೋಕ್ ಕುಮಾರ್, ಎಚ್.ಆರ್. ಹೆತ್ತೂರ್ ಅಶೋಕ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಚ್.ಆರ್. ಚಂದ್ರೇಗೌಡ, ಬಿ.ಎಸ್. ಸೋಮಶೇಖರ್, ಸಿ. ಶಿವಸ್ವಾಮಿ, ವೈ.ಜಿ. ರಮೇಶ್, ಎಸ್.ಪಿ. ಪ್ರಕಾಶ್, ಮಾಜಿ ಖಜಾಂಚಿ ಮಂಜಪ್ಪ ಇತರರು ಉಪಸ್ಥಿತರಿದ್ದರು.