ಜಿಲ್ಲೆ

ಕಾರ್ಯದರ್ಶಿ ವಿರುದ್ಧ ಸದಸ್ಯರ ಪ್ರತಿಭಟನೆ

ರಾಣೆಬೆನ್ನೂರ: ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅವರನ್ನು ವರ್ಗಾವಣೆ ಮಾಡಲು ಆಗ್ರಹಿಸಿ ಸದಸ್ಯರು ಬುಧವಾರ ದಿಢೀರನೆ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ ಕಳಸದ ಮಾತನಾಡಿ, ಕಾರ್ಯದರ್ಶಿ ಸದಸ್ಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಹಿತಾಸಕ್ತಿಗೆ ಬೇಕಾದ ವಿಷಯಗಳನ್ನು ಬರೆದುಕೊಂಡು ಸಭೆಯಲ್ಲಿ ಚರ್ಚೆಯಾಗದ ವಿಷಯಗಳನ್ನು ಪಾಸು ಮಾಡಿಕೊಳ್ಳುತ್ತಿದ್ದಾರೆ.

ಮೆಗಾ ಮಾರುಕಟ್ಟೆ ಅಭಿವೃದ್ಧಿ ಕೆಲಸದ ಬಗ್ಗೆ ಡಿಸೈನ್ ಹಾಗೂ ಡ್ರಾಯಿಂಗ್ ಮಾಡಲು ಧಾರವಾಡದ ಖಾಸಗಿ ಸಂಸ್ಥೆಗೆ ನೀಡುವಂತೆ ಠರಾವು ಪಾಸು ಮಾಡಲಾಗಿತ್ತು. ಕಾರ್ಯದರ್ಶಿ ಈವರೆಗೂ ಅವರಿಗೆ ಆದೇಶ ಪ್ರತಿ ನೀಡಿಲ್ಲ. ಜನವರಿಯಿಂದ ಮಾರ್ಚ್​ವರೆಗೆ ಮಾರುಕಟ್ಟೆಗೆ ಬರುವ ಲಾರಿಗಳಿಂದ ದಂಡ ವಸೂಲಿ ಮಾಡಿದ್ದಾರೆ. ನಂತರದ ದಿನದಲ್ಲಿ ಮಾಡಿಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಚೇರಿಯ ನೌಕರ ಹಾಗೂ ಸಿಬ್ಬಂದಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಇವರಿಂದ ಇಡೀ ಎಪಿಎಂಸಿಗೆ ಕೆಟ್ಟ ಹೆಸರು ಬರುವಂತಾಗಿದೆ. ಆದ್ದರಿಂದ ಇವರನ್ನು ಕೂಡಲೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಸವರಾಜ ಹುಲ್ಲತ್ತಿ, ಮಂಜನಗೌಡ ಪಾಟೀಲ, ಕಮಲವ್ವ ಪಾರ್ವತೇರ, ಸಿದ್ದಲಿಂಗಪ್ಪ ಕುಡಗೋಲ, ಬಸವರಾಜಪ್ಪ ಸವಣೂರ, ಶಕುಂತಲಾ ಮಾರೇರ, ರಮೇಶ ನಾಯಕ, ಸುರೇಶ ಬೀರಾಳ ಮತ್ತಿತರರು ಪಾಲ್ಗೊಂಡಿದ್ದರು.