ಬೀರೂರು ಸಮೀಪದ ಹೋರಿತಿಮ್ಮನಹಳ್ಳಿ ಅಂಗನವಾಡಿ.  
ಜಿಲ್ಲೆ

ಕಾರ್ಯಕರ್ತೆ ಮನೆಗೆ ಸೇರಿತು ಮೊಟ್ಟೆ!

ಬೀರೂರು: ಸಾಮಾನ್ಯ ವರ್ಗದ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಅರಿವು ಮೂಡಿಸುವ, ಬಡವರ್ಗದ ಪಾಲಕರಿಗೆ ಶಿಶು ಪಾಲನೆಯ ಹೊರೆ ಕಡಿಮೆ ಮಾಡುವ ಉದ್ದೇಶ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡಬಾರದು ಎಂಬ ಕಾಳಜಿಯಿಂದ ಸರ್ಕಾರ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಪೌಷ್ಟಿಕ ಆಹಾರದಲ್ಲಿ ಮೊಟ್ಟೆಯೂ ಸೇರಿದೆ. ಆದರೆ ಹೋರಿತಿಮ್ಮನಹಳ್ಳಿ ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡಬೇಕಿದ್ದ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆ ಬರೋಬ್ಬರಿ ಎರಡು ವರ್ಷದಿಂದ ನೀಡದೆ ಪುಟಾಣಿ ಮಕ್ಕಳಿಗೆ ವಂಚಿಸಿದ್ದಾರೆ.

ಹೋರಿತಿಮ್ಮನಹಳ್ಳಿ ಅಂಗನವಾಡಿಯಲ್ಲಿ 6 ಮಕ್ಕಳಿದ್ದು, ಒಬ್ಬ ಕಾರ್ಯಕರ್ತೆ ಹಾಗೂ ಸಹಾಯಕಿ ಇದ್ದಾರೆ. 2023ರ ಆಗಸ್ಟ್‌ನಿಂದಲೂ ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ಸಮರ್ಪಕವಾಗಿ ನೀಡದೆ, ನೋಂದಣಿ ಬುಕ್‌ನಲ್ಲಿ ಮಾತ್ರ ಕಾಲಕಾಲಕ್ಕೆ ಆಹಾರ ಸೌಲಭ್ಯ ಒದಗಿಸಿದ್ದೇವೆ ಎಂದು ನಮೂದಿಸಲಾಗಿತ್ತು. ಇದರ ಬಗ್ಗೆ ಗ್ರಾಮಸ್ಥರು ಹಾಗೂ ಪಾಲಕರು ಪ್ರಶ್ನೆ ಮಾಡಿ ಕಾರ್ಯಕರ್ತೆಯೊಂದಿಗೆ ನಡೆಸಿದ ಚರ್ಚೆಯ ಸಂಪೂರ್ಣ ಘಟನೆಯನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ. ವೀಡಿಯೋ ರೆಕಾರ್ಡ್ ಆಗಿದೆ ಎಂದು ತಿಳಿದ ಕಾರ್ಯಕರ್ತೆ ತಪ್ಪಾಗಿದೆ ಈ ವಿಷಯಯನ್ನು ಮರೆತುಬಿಡಿ. ಇನ್ನುಮುಂದೆ ಹೀಗೆಲ್ಲ ಮಾಡುವುದಿಲ್ಲ ಎಂದು ಅಂಗಾಲಾಚಿದ್ದಾರೆ. ಆಗಿರುವ ತಪ್ಪಿಗೆ ಇಷ್ಟು ದಿನದ ಮೊಟ್ಟೆಯ ಹಣ ಪಾವತಿಸುತ್ತೇನೆ. ಇನ್ನುಮುಂದೆ ಮೊಟ್ಟೆಯನ್ನು ಮಕ್ಕಳಿಗೆ ನೀಡುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.

ಅಂಗನವಾಡಿಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡದರೆ ವಂಚಿಸುತ್ತಿರುವ ಕಾರ್ಯಕರ್ತೆಯನ್ನು ಪಾಲಕರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ವಿಷಯ ತಿಳಿದ ಕಡೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಿವಪ್ರಕಾಶ್ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದರು. ಗ್ರಾಮಸ್ಥರಿಂದ ಹೇಳಿಕೆ ಪಡೆದು, ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ಅಂಗನವಾಡಿಗಳಿಗೆ ಯಾವುದೇ ಕೊರತೆ ಬಾರದಂತೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾರ್ಯಕರ್ತೆಯಗೆ ಗೌರವಧನ ನೀಡುತ್ತಿದೆ. ಇಷ್ಟಾದರೂ ಸಮರ್ಪಕ ಸೇವೆ ನೀಡದೆ ನಿರ್ಲಕ್ಷ್ಯ ತೋರುತ್ತಿರುವುದು ಗಂಭೀರ ಅಪರಾಧ. ಇಲ್ಲಿಯವರೆಗೆ ಮಕ್ಕಳಿಗೆ ಮೊಟ್ಟೆ ನೀಡದಿದ್ದಕ್ಕೆ ಅದಕ್ಕೆ ತಗಲುವ ಖರ್ಚನ್ನು ಆ ಮಕ್ಕಳಿಗೆ ನೀಡಿ, ಗ್ರಾಮಸ್ಥರ ಮುಂದೆ ಕ್ಷಮೆಯಾಚಿಸಿ ಎಂದು ಸೂಚಿಸಿದರು. ತಕ್ಷಣದಿಂದ ಕಾರ್ಯಕರ್ತೆಯನ್ನು ಸೇವೆಯಿಂದ ಬಿಡುಗಡೆಗೊಳಿಸಿ ಬೀರೂರಿನ ಬಳ್ಳಾರಿಕ್ಯಾಂಪ್ ಅಂಗನವಾಡಿಗೆ ವರ್ಗಾವಣೆ ಮಾಡಿದರು. ತನಿಖೆಯ ನಂತರ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಂಗನವಾಡಿ ಮೇಲ್ವಿಚಾರಕಿ ಅನಿತಾ, ಪಾಲಕರಾದ ಮಂಜಮ್ಮ, ಸವಿತಾ, ಸಿಂಧು, ಭವಾನಿ, ಸಂತೋಷ್, ಕಾರ್ತಿಕ್, ರಮೇಶ, ಸುನೀತಾ, ಸುಪ್ರಿತಾ, ಸರಸ್ವತಿ ಹಾಗೂ ಗ್ರಾಮಸ್ಥರು ಇದ್ದರು.