ಚಿತ್ರದುರ್ಗ: ಬಿಜೆಪಿಯಲ್ಲಿ ಕಾರ್ಯಕರ್ತರೇ ಪ್ರಮುಖರು. ಅವರೇ ಜೀವಾಳ ಎಂದು ಹಾಸನದ ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.
ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಜನ ಸಂಘದ ನೇತಾರ ಪಂಡಿತ್ ದೀನ್‌ದಯಾಳ್‌ಉಪಾಧ್ಯಾಯರ ಜಯಂತಿ ಹಾಗೂ ಆತ್ಮ ನಿರ್ಭರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಹಲವು ಪಕ್ಷಗಳು ಕುಟುಂಬದ ಪಾರ್ಟಿಗಳಾಗಿವೆ. ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದ ಈ ಪಕ್ಷಗಳಿಗೆ ಮನೆತನವೇ ಪ್ರಮುಖವಾಗಿದೆ. ಆದರೆ, ಬಿಜೆಪಿ ವಿಭಿನ್ನವಾಗಿದೆ. ಪ್ರತಿ ಮೂರು ವರ್ಷಕ್ಕೆ ಬೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಚುನಾವಣೆ/ನೇಮಕದ ಮೂಲಕ ಪಕ್ಷದ ನಾನಾ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಕುಟುಂಬದವರನ್ನೆ ನೇಮಿಸಬೇಕೆಂಬ ಪರಿಪಾಠ ನಮ್ಮಲ್ಲಿ ಇಲ್ಲ. ಕುಟುಂಬ ರಾಜಕಾರಣಕ್ಕೆ ಮಾನ್ಯತೆ ಇಲ್ಲ. ನಿಷ್ಠೆಯಿಂದ ಕೆಲಸ ಮಾಡುವ ಕಾರ್ಯಕರ್ತರು ಪಕ್ಷದಲ್ಲಿ ಉನ್ನತ ಹುದ್ದೆಗಳನ್ನೇರುವ ಅವಕಾಶವಿದೆ ಎಂದರು.
ಮುಂಬರುವ ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕಾರ್ಯಕರ್ತರು ತಕ್ಷಣದಿಂದಲೇ ಸಜ್ಜಾಗಬೇಕಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಹಿಂದೆ ಬಿಜೆಪಿ ಆಡಳಿತಾವಧಿಯ ಜನಪರ ಕೆಲಸಗಳನ್ನು ಜನರ ಮನೆಗಳಿಗೆ ತಲುಪಿಸಬೇಕಿದೆ. ಸ್ಪರ್ಧಾ ಆಕಾಂಕ್ಷಿಗಳು ಜನರ ವಿಶ್ವಾಸಗಳಿಸಬೇಕು. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದು ಪ್ರೀತಂಗೌಡ ಕಿವಿಮಾತು ಹೇಳಿದರು.
ಆತ್ಮ ನಿರ್ಭರದ ಕುರಿತು ಉಪನ್ಯಾಸ ನೀಡಿದ ಎಂಎಲ್‌ಸಿ ಕೆ.ಎಸ್. ನವೀನ್, ವಿದೇಶಿ ವಸ್ತುಗಳ ಬಳಕೆಗೆ ಕಡಿವಾಣ ಹಾಕುವ ಮೂಲಕ ಸ್ವದೇಶಿ ಉತ್ಪನ್ನಗಳ ಬಳಕೆ ಉತ್ತೇಜಿಸಬೇಕಿದೆ. ಆ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.
ಶಾಸಕ ಡಾ.ಎಂ. ಚಂದ್ರಪ್ಪ, ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿದರು. ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್, ನೇರ‌್ಲಗುಂಟೆತಿಪ್ಪೇಸ್ವಾಮಿ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಎ. ಮುರಳಿ, ಹನುಮಂತೇಗೌಡ, ಲಕ್ಷ್ಮೀಕಾಂತ್, ಬಾಳೆಕಾಯಿ ರಾಮದಾಸ್, ಅನಿಲ್‌ಕುಮಾರ್, ಸಿದ್ದಾಪುರ ಸುರೇಶ್, ಸಂಪತ್‌ಕುಮಾರ್ ಇತರ ಪ್ರಮುಖರು ಇದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾಹಿತಿ ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ಪಂಡಿತ್‌ದೀನ್‌ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ನಗರದ ಎಂಕೆ ಪ್ಯಾಲೇಸ್ ಸಮೀಪದ ತ್ರಿಶೂಲಾಂಜನೇಯ ದೇವಾಲಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
---ಕೋಟ್---
ಕಾರ್ಯಕರ್ತರನ್ನು ಕಡೆಗಣಿಸದೆ ಪ್ರೋತ್ಸಾಹಿಸುವ ಕೆಲಸವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಪ್ರಪಂಚದಲ್ಲಿ ಭಾರತದ ಕೀರ್ತಿ ಹೆಚ್ಚಾಗಿದೆ. ಅವರ ನೇತೃತ್ವದಲ್ಲಿ ದೇಶಾದ್ಯಂತ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ.
ಡಾ.ಎಂ. ಚಂದ್ರಪ್ಪ, ಶಾಸಕ
---