ಜಿಲ್ಲೆ

ಕಾರ್ಯಕರ್ತರೇ ಕಾಂಗ್ರೆಸ್‌ಗೆ ಆಧಾರ; * ಶಿಡ್ಲಘಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

ಶಿಡ್ಲಘಟ್ಟ: ಶಿಡ್ಲಘಟ್ಟ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವ ಗೊಂದಲ ಬೇಡ, ವಿ.ಮುನಿಯಪ್ಪ ಪಕ್ಷದ ಹಿರಿಯ ಮುಖಂಡರು, ಹಾಲಿ ಶಾಸಕರು, ಅವರ ನೇತೃತ್ವದಲ್ಲಿಯೇ ಸಂಘಟನೆ ನಡೆಯಲಿದೆ. ಯಾರೇ ಆದರೂ ಅವರ ಕೈ ಕೆಳಗೆ ದುಡಿಯಬೇಕು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರೇ ಕಾಂಗ್ರೆಸ್‌ಗೆ ಆಧಾರ ಸ್ತಂಭ. 12 ವರ್ಷಗಳ ನಂತರ ಆರಂಭವಾಗಿರುವ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇಂತಹ ಸರ್ಕಾರವನ್ನು ಜನ ಕಿತ್ತೊಗೆಯಬೇಕು. ಅದಕ್ಕಾಗಿ ಕಾಂಗ್ರೆಸ್ ಸದಸ್ಯರಾಗಿ ರಾಜ್ಯದಲ್ಲಿ ಬದಲಾವಣೆ ತನ್ನಿ ಮನವಿ ಮಾಡಿದರು.

ಶಾಸಕ ವಿ.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಲೂರಿನ ಮಾಜಿ ಶಾಸಕ ಎ.ನಾಗರಾಜು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಎಂಎಲ್‌ಸಿ ಎಂ.ಎಲ್.ಅನಿಲ್‌ಕುಮಾರ್ ಮತ್ತಿತರರು ಇದ್ದರು.

ಡಿಕೆಶಿ ನಗರಕ್ಕೆ ಬಂದರೂ ಮಾಜಿ ಸಂಸದ ಹಾಗೂ ಇದೇ ತಾಲೂಕಿನ ಕಂಬದಹಳ್ಳಿಯ ಕೆ.ಎಚ್.ಮುನಿಯಪ್ಪ ಸೇರಿ ಬಹುತೇಕ ಕಾಂಗ್ರೆಸ್ ಮುಖಂಡರು ಸೇರಿ ಹಲವು ಮುಖಂಡರು ಕಾರ್ಯಕ್ರಮಕ್ಕೆ ಗೈರಾಗಿರುವುದು ಎದ್ದು ಕಾಣುತ್ತಿತ್ತು.

ಬೊಮ್ಮಾಯಿ ರಾಜೀನಾಮೆ ನೀಡಲಿ: ಗೃಹ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಗೃಹ ಇಲಾಖೆಯ ಪಿಎಸ್‌ಐ, ಸಿಪಿಐ, ಎಸಿಪಿ, ಡಿಸಿಪಿಗೆ ವರ್ಷಕ್ಕೆ ಇಂತಿಷ್ಟು ರೇಟ್ ಅಂತ ಮಾಧ್ಯಮಗಳ ವರದಿಗಳಿಂದ ಬಹಿರಂಗವಾಗಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಎಚ್‌ಡಿಕೆಗೆ ಟಾಂಗ್: ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್, ಭೋಜನ ಸವಿದಿದ್ದು ಬಿಟ್ಟರೆ ಬೇರೇನೂ ಪ್ರಯೋಜನವಿಲ್ಲ ಎಂದಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಮೇಕೆದಾಟುವಿನಿಂದ ಉಪಯೋಗವಿಲ್ಲ ಎನ್ನುವ ಅವರು ಮತ್ಯಾಕೆ ನಮ್ಮಕಾರ್ಯಕ್ರಮವನ್ನು ಹೈಜಾಕ್ ಮಾಡಿದರು ಅಂತ ಹೇಳಿದ್ರಲ್ಲಾ, ಏಕೆ ಅಂತ ಹೇಳಲಿ. ಈಗ ಅವರು ಅದೇನೋ ಜಲಧಾರೆ ಮಾಡಲು ಹೊರಟಿದ್ದಾರಲ್ಲ, ದಯವಿಟ್ಟು ಅದನ್ನಾದರೂ ಮಾಡಿ ಜನತೆಗೆ ಜಲಧಾರೆ ಹರಿಸಲಿ, ನಾವೂ ಸಹ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದರು.

ನೀರು ಹರಿಯಲ್ಲ ಎಂದಿದ್ದ ಸಿಎಂ: ಮೇಕೆದಾಟು ಯೋಜನೆಯಿಂದ ನೀರು ಹರಿಯಲ್ಲ ಎಂದಿದ್ದ ಸಿಎಂ ಬಜೆಟ್‌ನಲ್ಲಿ ಸಾವಿರ ಕೋಟಿ ಇಟ್ಟಿದ್ದು ಏಕೆ?. ಯೋಜನೆಗೆ ಸಂಬಂದಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವ ಶೇಖಾವತ್ ಮುಂದೆ ಮೇಕೆದಾಟು ಯೋಜನೆ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುವ ಮೂಲಕ ಬದ್ಧತೆ ಪ್ರದರ್ಶಿಸಬೇಕಿತ್ತು. ಕೇಂದ್ರ ಸಚಿವರ ಮುಂದೆ ಬದ್ಧತೆ ತೋರದಿರುವುದೇ ನಿಮ್ಮ ವೈಫಲ್ಯಕ್ಕೆ ಕಾರಣ. ಬಜೆಟ್‌ನಲ್ಲಿ ಸಾವಿರ ಕೋಟಿ ಇಟ್ಟಿದ್ದೀರಲ್ಲಾ ಶೀಘ್ರ ಕೆಲಸ ಪ್ರಾರಂಭಿಸಿ.

2 ರಾಜ್ಯದ ಸಿಎಂ ಚರ್ಚಿಸಲಿ: ನೀರಾವರಿ ಯೋಜನೆಗಳಿಗೆ ಕ್ಯಾತೆ ತೆಗೆಯುವುದೇ ತಮಿಳುನಾಡಿನ ಉದ್ದೇಶ. ಮೊದಲಿನಿಂದಲೂ ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅಗತ್ಯವಿದ್ದಲ್ಲಿ ಎರಡು ರಾಜ್ಯದ ಮುಖ್ಯಮಂತ್ರಿಗಳು ಚರ್ಚಿಸಲಿ, ಇದರಲ್ಲಿ ನಮ್ಮ ಅಭ್ಯಂತರವಿಲ್ಲ ಎಂದರು.