ಜಿಲ್ಲೆ

ಕಾರ್ಯಕರ್ತರ ಶ್ರಮ ಸ್ಮರಣೀಯ

Dharwad

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸ ಅವಲೋಕಿಸಿದಾಗ ಧಾರವಾಡದ ಕೊಡುಗೆ ಅನನ್ಯವಾಗಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿನ ರಾಮನಗರದಲ್ಲಿ ಮಂಗಳವಾರ ಶಿವಕೃಪಾ ಟ್ರಸ್ಟ್‌ನ ನೂತನ ಕಾರ್ಯಾಲಯದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 1941ರಲ್ಲಿ ಧಾರವಾಡದಲ್ಲಿ ಸಂಘದ ಕಾರ್ಯ ಆರಂಭವಾಯಿತು. ಇಡೀ ರಾಜ್ಯದಲ್ಲಿ ಮೊಟ್ಟ ಮೊದಲ ಸಂಘದ ಕಾರ್ಯಾಲಯ ನಿರ್ಮಾಣವಾಗಿದ್ದು ಧಾರವಾಡದಲ್ಲೇ ಎಂದರು.
ದ್ವಿತೀಯ ಮಹಾಯುದ್ಧ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ರಾಷ್ಟ್ರ ಸೇವೆಗೆ ಹಿಂದಿನ ಪೀಳಿಗೆ ಕಾರ್ಯಕರ್ತರ ಶ್ರಮ ಪ್ರೇರಣಾದಾಯಕವಾಗಿದೆ. ಎಲ್ಲ ಅಡೆ ತಡೆಗಳನ್ನು ಮೀರಿ ಸರ್ವಸ್ವವನ್ನೂ ತ್ಯಾಗ ಮಾಡಿ ಸಂಘ ಕಾರ್ಯದ ಬೆಳೆವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಸಾವಿರಾರು ಸ್ವಯಂ ಸೇವಕರು ಸಮರ್ಪಣಾ ಭಾವದಿಂದ ಸಂಘದ ಬೆಳೆವಣಿಗೆಗೆ ತನು, ಮನ, ಧನಗಳಿಂದ ಅರ್ಪಿಸಿಕೊಂಡಿದ್ದಾರೆ. ಇದೇ ಕಾರ್ಯವನ್ನು ಪ್ರಸ್ತುತ ಪೀಳಿಗೆ ಕಾರ್ಯಕರ್ತರು ಮುಂದುವರೆಸುತ್ತಿರುವುದು ವಿಶೇಷ ಎಂದರು.
ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕ ಸು. ರಾಮಣ್ಣ, ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಟ್ರಸ್ಟ್ ಅಧ್ಯಕ್ಷ ಅಮರ ಟಿಕಾರೆ, ಆರ್‌ಎಸ್‌ಎಸ್‌ನ ಹಿರಿಯರಾದ ಶ್ರೀಧರ ನಾಡಗೀರ, ನರೇಂದ್ರ ಜಿ, ಸುರೇಶರಾವ್, ಸೋನಕರ, ಶಾಸಕ ಅರವಿಂದ ಬೆಲ್ಲದ, ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಸಹಾಯಕ ಆಯುಕ್ತ ಆರ್.ಎಂ. ಕುಲಕರ್ಣಿ, ವೆಂಕಟೇಶ ಖಾರ್ವಿ, ಶ್ರೀನಿವಾಸ ನಾಡಗೀರ, ಶರಣು ಅಂಗಡಿ, ಇತರರು ಇದ್ದರು. ಟ್ರಸ್ಟ್‌ನ ವಿಶ್ವಸ್ಥ ಜಗದೀಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.