ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬಿಜೆಪಿಗೆ ಕಾರ್ಯಕರ್ತರೆ ಆಸ್ತಿ. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಸೇರಿ ಕಾರ್ಯಕರ್ತರ ಬಲಿಷ್ಠ ಪಡೆಯನ್ನು ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಂಜೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ನೂತನ ಅಧ್ಯಕ್ಷ ರಾಜು ಕಾಳೆ ನೇತೃತ್ವದಲ್ಲಿ ನಡೆದ ಪ್ರಥಮ ಸಂಘಟನಾತ್ಮಕ ಮಾಸಿಕ ಸಭೆಯು ಮಾತನಾಡಿದ ಅವರು, ಸೆಂಟ್ರಲ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವಿ ಕಾರ್ಯಕರ್ತರ ಪಡೆಯಿದ್ದು ಅವರೆಲ್ಲರೂ ಸಂಘಟನಾತ್ಮಕ ವಿಷಯದಲ್ಲಿ ಅನುಭವಿಗಳಾಗಿದ್ದಾರೆ ಎಂದರು.
ಯಾವುದೇ ಜವಾಬ್ದಾರಿ ನೀಡಿದರು ಅದನ್ನು ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಕಾರ್ಯಕರ್ತರಿಗೆ ಇರಬೇಕು. ಸೆಂಟ್ರಲ್ ಕ್ಷೇತ್ರದ ಎಲ್ಲ 25 ವಾರ್ಡ್ಗಳಲ್ಲಿ ಅರ್ಹರು ಹಾಗೂ ಸಮರ್ಥರನ್ನು ಮಂಡಲ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳಾಗಿ ನೇಮಿಸಲು ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಸಲಹೆ ಸೂಚನೆಗಳನ್ನು ನೀಡಿದರು. ರಾಜು ಕಾಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ ವಾಲ್ಮೀಕಿ ನಿರೂಪಿಸಿದರು.
ಪಾಲಿಕೆಯ ಸದಸ್ಯರಾದ ವೀಣಾ ಬರದ್ವಾಡ, ಮಲ್ಲಿಕಾರ್ಜುನ ಗುಂಡೂರ, ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ, ರೂಪಾ ಶೆಟ್ಟಿ, ಮೀನಾಕ್ಷಿ ವಂಟಮುರಿ, ಜಿಲ್ಲಾ ವಕ್ತಾರ ರವಿ ನಾಯಕ, ಈಶ್ವರ ಗೌಡ ಪಾಟೀಲ, ಅಕ್ಕಮಹಾದೇವಿ ಹೆಗಡೆ, ಸೀಮಾ ಲದ್ವಾ, ಇತರರು ಇದ್ದರು.