ಕಲಬುರಗಿ: ಜಿಲ್ಲೆಯಲ್ಲಿ ಜೆಡಿಎಸ್‌ಗೆ ಭದ್ರ ನೆಲೆ ಇದೆ. ಎಲ್ಲ ಕ್ಷೇತ್ರಗಳಲ್ಲೂ ನಿಷ್ಠಾವಂತ ಕಾರ್ಯಕರ್ತರಿದ್ದು, ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿ ಸಂಘಟನೆಗೆ ಬಲ ತುಂಬುವ ಕೆಲಸವನ್ನು ಅಧ್ಯಕ್ಷನಾಗಿ ಅಲ್ಲ ಕಾರ್ಯಕರ್ತನಾಗಿ ಮಾಡುವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಭರವಸೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಜೆಡಿಎಸ್ ನೂತನ ರಾಜ್ಯ ಕಾರ್ಯಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಎಚ್.ಡಿ.ದೇವೇಗೌಡರು ಉತ್ತರ ಕರ್ನಾಟಕದ ನೀರಾವರಿಗೆ ಹಣ ಕೇಳಿದ್ದಾಗ ಇಲ್ಲ ಎಂದಿದ್ದರು. ಆಗ ದೇವೇಗೌಡರು. ಸಚಿವ ಸ್ಥಾನವನ್ನೇ ತ್ಯಜಿಸಿದ್ದರು. ಅದೇ ರೀತಿ ಅಧಿಕಾರ, ಖುರ್ಚಿಗಾಗಿ ಬಡಿದಾಡದೇ ಜನರ ಮನೆ ಮನೆಗೆ ಪಕ್ಷವನ್ನು ತಲುಪಿಸಬೇಕಿದೆ ಎಂದು ಹೇಳಿದರು.
ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುವವರಿಗೆ ಅಲ್ಪ ಮತಗಳಿಂದ ಜೇವರ್ಗಿಯಲ್ಲಿ ಸೋತಿರುವುದು ಸಾಕ್ಷಿಯಿದೆ. ರಾಜ್ಯದಲ್ಲಿ ರೈತರು, ನೀರಾವರಿ, ಭ್ರಷ್ಟಾಚಾರ, ಹಸಿವು, ಬಡತನದ ಸಮಸ್ಯೆಗಳಿವೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿ, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದು, ಅದರ ವಿರುದ್ಧ ಕಾರ್ಯಕರ್ತರು ನಿರ್ಭಯವಾಗಿ ಧ್ವನಿ ಎತ್ತಬೇಕು. ಪ್ರಾದೇಶಿಕ ಪಕ್ಷಕ್ಕೆ ಬಲ ತುಂಬಬೇಕು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸೋಣ. ರೈತರಿಗಾಗಿ ಇಡೀ ದೇಶದಲ್ಲಿ ಅತ್ಯಂತ ಸಮರ್ಪಕ ಯೋಜನೆ ನೀಡಿದ್ದು, ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರಗಳು. ಹಿಂದುಳಿದ, ದಲಿತ, ಅಲ್ಪಸಂಖ್ಯಾತರನ್ನು ಮರೆಯುವುದಿಲ್ಲ. ಜತೆಗೆ ಇರಲಿದ್ದೇವೆ. ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಅನುದಾನ ಹೊಡೆದಿದ್ದು, ಎಲ್ಲ ವಿಚಾರ ಜನರಿಗೆ ತಲುಪಿಸಬೇಕು ಎಂದರು.
ಮುಖಂಡ ಬಸವರಾಜ ಬಿರಬಿಟ್ಟಿ ಮಾತನಾಡಿ, ಪಕ್ಷದಲ್ಲಿ ಸಂಘಟನಾ ಚತುರರು, ಬುದ್ಧಿವಂತರು ಇದ್ದಾರೆ. ಅವರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಮಾಜಿ ಜಿಲ್ಲಾಧ್ಯಕ್ಷ ದೇವೇಗೌಡ ತೆಲ್ಲೂರ, ಹಿರಿಯ ಮುಖಂಡ ಶಾಮರಾವ ಸೂರನ್ ಮಾತನಾಡಿ, ಹಲವು ಸಂಭ್ರಮ, ಸಂಕಷ್ಟ, ಸವಾಲುಗಳ ಮಧ್ಯೆ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಅದನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದರು.
ಜೆಡಿಎಸ್ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಮಾತನಾಡಿದರು. ಪ್ರಮುಖರಾದ ಅಶೋಕ ಗುತ್ತೇದಾರ, ಮಹೇಶ್ವರಿ ವಾಲಿ, ಮಲ್ಲಿಕಾರ್ಜುನ, ರಾಜು ನೀಲಂಗಿ, ಸುನಿತಾ ತಳವಾರ, ಬಸವರಾಜ ಪಾಟೀಲ್, ಸಮೀರ ಬಾಗವಾನ್ ಇತರರಿದ್ದರು. ಸಿದ್ದಣ್ಣ ಪಾಟೀಲ್ ಸ್ವಾಗತಿಸಿದರು.