ಪಾಂಡವಪುರ ಪಟ್ಟಣದಲ್ಲಿ ವಾಹನ ಸಂಚಾರ ದಟ್ಟಣೆಯಾಗಿ ವಾಹನಗಳು ಅಡ್ಡದಿಡ್ಡ ಸಂಚರಿಸುತ್ತಿರುವುದು.  
ಜಿಲ್ಲೆ

ಕಾರ್ಯ ನಿರ್ವಹಿಸದ ಸಿಗ್ನಲ್ ದೀಪಗಳು

Mandya

ಪಾಂಡವಪುರ: ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು, ಸಂಚಾರ ದಟ್ಟಣೆ ಹೆಚ್ಚುತ್ತಿರುವ ಪರಿಣಾಮ ವಾಹನಗಳು ಅಡ್ಡಾದಿಡ್ಡಿ ಸಂಚರಿಸುತ್ತಿವೆ. ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಳವಾಗುವ ಮೂಲಕ ಜನರು ತಿರುಗಾಡಲು ಯಾತನೆ ಅನುಭವಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪಟ್ಟಣದ ಐದು ದೀಪ ಮತ್ತು ಡಾ.ರಾಜಕುಮಾರ್ ಇಲ್ಲಿನ ಪ್ರಮುಖ ವೃತ್ತಗಳಾಗಿದೆ. ಐದು ದೀಪಗಳ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಯಾಗಿದ್ದರೂ ನಿರ್ವಹಣೆ ಇಲ್ಲದೆ ಹಲವು ವರ್ಷಗಳಿಂದ ತುಕ್ಕು ಹಿಡಿಯುತ್ತಿದೆ. ಅಳವಡಿಕೆ ಸಂದರ್ಭ ಪ್ರಾಯೋಗಿಕವಾಗಿ ಪರೀಕ್ಷಿಸುವ ವೇಳೆ ಬಿಟ್ಟರೆ ಒಮ್ಮೆಯೂ ದೀಪ ಕಾರ್ಯ ನಿರ್ವಹಿಸಿಯೇ ಇಲ್ಲ.

ಇನ್ನು ರಾಜಕುಮಾರ್ ವೃತ್ತದಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿಯೇ ಇಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಮಧ್ಯ ಭಾಗದಲ್ಲೇ ಹಾದು ಹೋಗಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಮೈಸೂರಿನಿಂದ ಪಾಂಡವಪುರ ಮಾರ್ಗವಾಗಿ ನಾಗಮಂಗಲ, ತುಮಕೂರು, ತುರುವೆಕೆರೆ, ಚಿಕ್ಕನಾಯಕನಹಳ್ಳಿ, ಹಿರಿಯೂರು, ಚಿತ್ರದುರ್ಗ ಸೇರಿದಂತೆ ಅನೇಕ ನಗರಗಳಿಗೆ ತೆರಳಲು ಈ ಮಾರ್ಗ ಬಳಕೆಯಾಗುತ್ತಿರುವುದೂ ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಪಟ್ಟಣದ ಪ್ರಮುಖ ಎರಡೂ ವೃತ್ತಗಳ ಸಮೀಪದಲ್ಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಉಪವಿಭಾಗೀಯ ಆಸ್ಪತ್ರೆ, ಉಪನೋಂದಣಾಧಿಕಾರಿ ಕಚೇರಿ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಬಕಾರಿ, ತೋಟಗಾರಿಕೆ, ಸೆಸ್ಕ್, ಸಿನಿಮಾ ಟಾಕೀಸ್, ಎಸ್‌ಬಿಐ ಬ್ಯಾಂಕ್, ಬೈಕ್ ಷೋರೂಂ, ಆಟೋ, ಗೂಡ್ಸ್ ವಾಹನಗಳ ನಿಲ್ದಾಣಗಳಿಂದಾಗಿ ಈ ರಸ್ತೆಯಲ್ಲಿ ಬೆಳಗ್ಗೆ 10 ರಿಂದ ರಾತ್ರಿ 7 ರವರೆಗೆ ಸಂಚಾರ ಕಷ್ಟಸಾಧ್ಯ.

ವೃತ್ತದ ಒಂದು ಬದಿಯ ರಸ್ತೆಯಾದ ಡಿಸಿಸಿ ಬ್ಯಾಂಕ್ ರಸ್ತೆ ಹಾಗೂ ಮತ್ತೊಂದು ಬದಿಯ ನಿರ್ಮಲಾ ಕಾನ್ವೆಂಟ್ ರಸ್ತೆಗಳನ್ನು ಬೀದಿ ಬದಿ ವ್ಯಾಪಾರಿಗಳು, ತಳ್ಳುವ ಗಾಡಿಗಳು, ಫಾಸ್ಟ್ ಪುಡ್ ಹಾಗೂ ನಾನ್‌ವೆಜ್ ಹೋಟೆಲ್‌ಗಳು ಪಾದಚಾರಿ ಮಾರ್ಗವನ್ನು ಆವರಿಸಿವೆ. ಹೀಗಾಗಿ ಪಾದಚಾರಿಗಳು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲೇ ಸಂಚರಿಸಬೇಕಿದೆ. ಇದು ಕೂಡ ಅಪಘಾತಗಳಿಗೆ ಇನ್ನೊಂದು ಕಾರಣವಾಗಿದೆ.

ತಾಲೂಕಿನ ವಿವಿಧ ಗ್ರಾಮಗಳಿಂದ ತಮ್ಮ ಕೆಲಸ-ಕಾರ್ಯಗಳಿಗಾಗಿ ಕಚೇರಿಗಳಿಗೆ ತೆರಳಲು ಆಗಮಿಸುವ ಜನರು ಹಾಗೂ ಹೋಟೆಲ್‌ಗಳಿಗೆ ತೆರಳುವ ಗ್ರಾಹಕರು ತಮ್ಮ ಬೈಕ್‌ಗಳನ್ನು ರಸ್ತೆಯಲ್ಲೇ ಅಡ್ಡಾದಿಡ್ಡಿ ನಿಲ್ಲಿಸುವುದ್ದರಿಂದ ಭಾರಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೂ, ಪೊಲೀಸರು ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮವಹಿಸಲು ಹಿಂದೇಟು ಹಾಕುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರಕುತ್ತಿಲ್ಲ.

ಪಟ್ಟಣದಲ್ಲಿ ವೇಗವಾಗಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ತಾಲೂಕು ಕಚೇರಿ ಮುಂಭಾಗ, ಬನ್ನಾರಿಯಮ್ಮ ದೇವಸ್ಥಾನ ಬಳಿ ರಸ್ತೆ ದಿಬ್ಬ ನಿರ್ಮಿಸಬೇಕಾದ ಅವಶ್ಯಕತೆ ಇದೆ. ಜತೆಗೆ ಕೆಎಸ್‌ಆರ್‌ಸಿ ಬಸ್ ನಿಲ್ದಾಣಕ್ಕೆ ತೆರಳುವ ಬಸ್‌ಗಳು ವೇಗವಾಗಿಯೇ ತಿರುವುಗಳನ್ನು ಪಡೆಯುತ್ತಿದ್ದು, ಕೆಲ ಚಾಲಕರ ಅಜಾಗರೂಕತೆಯ ಚಾಲನೆ ಅನೇಕರ ಪ್ರಾಣ ಪಡೆದಿದೆ. ಆದರೂ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಮಹಿಳೆಯರು, ವೃದ್ಧರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಸಮಸ್ಯೆಗಳನ್ನು ಯಾರಿಗೆ ಹೇಳಿದರೆ ಮುಕ್ತಿ ಸಿಗುತ್ತದೆ ಎಂಬುದು ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮೈಯೆಲ್ಲ ಕಣ್ಣಾಗಿ ಓಡಾಡಬೇಕಿದೆ ಎಂದು ಪಟ್ಟಣ ನಿವಾಸಿ ಅಶೋಕ್ ಹೇಳುತ್ತಾರೆ.

ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪ್ರಮುಖ ಎರಡು ವೃತ್ತಗಳಿಗೆ ಸಿಗ್ನಲ್ ಲೈಟ್ ಅಳವಡಿಸಿ ಅದನ್ನು ನಿರ್ವಹಣೆ ಮಾಡುವ ಕೆಲಸವಾಗಬೇಕಿದೆ. ಸಂಚಾರ ದಟ್ಟಣೆ ವೇಳೆ ಎರಡೂ ವೃತ್ತಗಳಲ್ಲೂ ಪೊಲೀಸ್ ಪೇದೆಗಳನ್ನು ನಿಯೋಜಿಸಿ ಟ್ರಾಫಿಕ್ ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಮರೆತಿದೆ. ವಾಹನ ತಪಾಸಣೆಗೆ ತೋರುವ ಆಸಕ್ತಿಯನ್ನು ಪೊಲೀಸರು ಸಂಚಾರ ನಿಯಂತ್ರಣಕ್ಕೆ ತೋರುವುದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಪುರಸಭೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಾಳಜಿ ಇಲ್ಲದಂತಾಗಿದೆ. ಐದು ದೀಪ ವೃತ್ತದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್‌ಲೈಟ್ ಬಳಕೆಗೆ ಕ್ರಮಕೈಗೊಳ್ಳಬೇಕೆಂಬ ಒತ್ತಾಯಗಳು ವಾಹನ ಸವಾರರಿಂದ ವ್ಯಕ್ತವಾಗಿದೆ

ಪಟ್ಟಣದ ಐದು ದೀಪಗಳ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್ ನಿರ್ವಹಣೆಯನ್ನು ಪೊಲೀಸ್ ಇಲಾಖೆ ನಿರ್ವಹಿಸಬೇಕಿದೆ. ಪುರಸಭೆಯಿಂದ ಈಗಾಗಲೇ ಟ್ರಾಫಿಕ್ ಸಿಗ್ನಲ್ ಲೈಟನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅದಕ್ಕೆ ಬ್ಯಾಟರಿ ಅಥವಾ ಇತರ ಸವಲತ್ತು ಅಗತ್ಯವಿದ್ದರೆ ಪೊಲೀಸ್ ಅಧಿಕಾರಿಗಳು ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು. ಡಾ.ರಾಜ್‌ಕುಮಾರ್ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಸಂಬಂಧ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
> ವೀಣಾ ಪುರಸಭೆ ಮುಖ್ಯಾಧಿಕಾರಿ.