ಜಿಲ್ಲೆ

ಕಾರ್ಮಿಕರು ಯೋಜನೆಯ ಲಾಭ ಪಡೆಯಿರಿ

ಸುರಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿಗೊಳಿಸಿದ್ದು, ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ಹೇಳಿದರು.

ನಗರದ ತಾಪಂ ಕಚೇರಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಶುಕ್ರವಾರÀ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟಪಟ್ಟು ದುಡಿಯುವ ಕೈಗಳಿಗೆ ಪುನಶ್ಚೇತನ ನೀಡಲು ವಿವಿಧ ಸೌಲಭ್ಯ ಕಾರ್ಮಿಕ ಇಲಾಖೆ ಮೂಲಕ ಅನುಷ್ಠಾನಕ್ಕೆ ತಂದಿದೆ ಎಂದರು.

ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಭತ್ಯೆ, ಧನ ಸಹಾಯ, ವಿವಾಹ ವೆಚ್ಚ, ಅಪಘಾತ ವಿಮೆ, ಕೆಲಸದಲ್ಲಿ ಕೈ-ಕಾಲು ಮುರಿದರೆ, ಜೀವ ಹಾನಿಯಾದರೆ ಪರಿಹಾರ, ಆರೋಗ್ಯ ವೆಚ್ಚ, ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ, ಮಾಶಾಸನ ಮಂಜೂರು ಸೇರಿ ಇತರೆ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ನ್ಯಾಯಾಂಗ ಇಲಾಖೆ ಉಚಿತವಾಗಿ ಕಾನೂನು ನೆರವು ನೀಡುತ್ತದೆ. ಇದನ್ನು ಅಸಂಘಟಿತ ವಲಯದ ಕಾರ್ಮಿಕರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಇಒ ಬಸವರಾಜ ಸಜ್ಜನ್ ಮಾತನಾಡಿದರು. ಕಾರ್ಮಿಕ ನಿರೀಕ್ಷಕ ಶಿವಪ್ಪ ಜಮಾದಾರ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಗೋಪಾಲ ತಳವಾರ ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ಸಹಾಯಕ ಅಭಿಯೋಜಕ ಮರೆಪ್ಪ ಹೊಸಮನಿ, ಸುರೇಶ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಂಗ್ಯಾಳ, ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಇತರರಿದ್ದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ನಿರೂಪಿಸಿ ವಂದಿಸಿದರು.