ಯಾದಗಿರಿ: ಅಸಂಘಟಿತ ವಲಯ ಕಾರ್ಮಿಕರು ಕಾರ್ಮಿಕರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಗುರುವಾರ ಜಿಪಂ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಡಿ ಕಾರ್ಮಿಕ ಸಮ್ಮಾನ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ್ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರಸ್ತುತ ದಿನಗಳಲ್ಲಿ ನಾನು ಮಾಲೀಕ, ನಾನು ಗುತ್ತಿಗೆದಾರ ಎಂಬ ಮನೋಭಾವ ಸರಿಯಲ್ಲ. ಕಾರ್ಮಿಕರಿಲ್ಲದೆ ಮಾಲೀಕ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಅಸಂಘಟಿತ ಕಾರ್ಮಿಕ ಪ್ರತಿಭೆ ಗುರುತಿಸಿ ಶ್ರಮ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ತಲೆತಲಾಂತರಿಂದ ಕಲಿತ ಕೌಶಲಕ್ಕೆ ಇಲಾಖೆಯಿಂದ ಪ್ರೋತ್ಸಾಹ ಮತ್ತು ತರಬೇತಿಯಂತಹ ಕಾರ್ಯಕ್ರಮ ಹಮ್ಮಿಕೊಂಡು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಎಂಎಸ್ವೈಎಂ) ಯೋಜನೆಯಡಿ ಅಸಂಘಟಿತ ಕಾರ್ಮಿಕ ರು ಸಂಧ್ಯಾಕಾಲದಲ್ಲಿ ದುಡಿದು ಜೀವನ ನಡೆಸುವುದು ಕಷ್ಟಸಾಧ್ಯ. ಇಂತಹವರಿಗೆ ವೃದ್ಧಾವಸ್ಥೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಈ ಪಿಂಚಣಿ ಯೋಜನೆ ನೆರವಾಗಲಿದೆ. ಪ್ರತಿಯೊಬ್ಬಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರೊನಾ ವೈರಸ್ ಬಗ್ಗೆ ಯಾರೂ ಭಯಪಡಬೇಕಿಲ್ಲ. ನಮ್ಮ ಜಿಲ್ಲೆಯಲ್ಲಿ ಕರೊನಾ ಬಗ್ಗೆ ಯಾವುದೇ ವರದಿ ಆಗಿಲ್ಲ. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಜನರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಮಾತನಾಡಿ, ರಾಜ್ಯ ಸರ್ಕಾರ 43 ವಲಯಗಳ ಅಸಂಘಟಿತ ಕಾರ್ಮಿಕ ರನ್ನು ಗುರುತಿಸಿ 2017-18ರಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯನ್ನು ಕನರ್ಾಟಕ ಅಸಂಘಟಿತ ಕ ಕಾರ್ಮಿಕ ರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅನುಷ್ಠಾನಗೊಳಿಸಿದೆ. ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ ಆಯುವವರು ಹಾಗೂ ಮೆಕಾನಿಕ್ಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಹರಿ ಇದ್ದರು. ಚಂದ್ರಶೇಖರ ಗೋಗಿ ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ನಿರೂಪಣೆ ಮಾಡಿದರು. ಗೃಹ ಕಾರ್ಮಿಕ ರು, ಟೇಲರಿಂಗ್, ಕ್ಷೌರಿಕರು, ಕುಂಬಾರರು, ಅಗಸರು (ಧೋಬಿ), ಮಂಡಕ್ಕಿ ಭಟ್ಟಿ ಹಾಗೂ ಹಮಾಲಿಗಳು ಸೇರಿ ವಿವಿಧ ಅಸಂಘಟಿತ ಕಾರ್ಮಿಕ ರಿಗೆ ಪ್ರಥಮ ಪ್ರಶಸ್ತಿ 15 ಸಾವಿರ ರೂ. ಮೌಲ್ಯದ ಚಿನ್ನದ ಪದಕ ಜತೆಗೆ ಪ್ರಶಂಸಾ ಪತ್ರ, ದ್ವಿತೀಯ ಪ್ರಶಸ್ತಿ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ಹಾಗೂ ತೃತೀಯ ಪ್ರಶಸ್ತಿ 8 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.