ಮೈಸೂರು: ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮದೊಂದಿಗೆ ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಾರ್ಖಾನೆಯ ಮಾಲೀಕರಿಗೆ ಸೂಚಿಸಿದರು.
ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 52ನೇ ರಾಷ್ಟ್ರೀಯ ಸುರಕ್ಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಖಾನೆಗಳಲ್ಲಿ ಕಾರ್ಮಿಕರ ರಕ್ಷಣೆ ಅತ್ಯಂತ ಪ್ರಮುಖವಾದದ್ದು, ಕಾರ್ಮಿಕರ ಸುರಕ್ಷತೆಯ ಜತೆಗೆ ಮೂಲ ಸೌಕರ್ಯ ನೀಡುವುದು ಕಾರ್ಖಾನೆಗಳ ಮಾಲೀಕರ ಕರ್ತವ್ಯ ಎಂದರು.
ಕಾರ್ಮಿಕರ ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ ಈ ಬಾರಿಯ ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕರಿಗೂ ಮತದಾನದ ಬಗ್ಗೆ ಅರಿವು ಮೂಡಿಸಿ ಮತ ಚಲಾಯಿಸುವಂತೆ ಮಾಡಬೇಕು ಎಂದು ನಿರ್ದೇಶಿಸಿದರು.
ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಕೆ.ಶ್ರೀನಿವಾಸ್ ಮಾತನಾಡಿ, ಪ್ರತಿಯೊಬ್ಬ ಕಾರ್ಮಿಕರು ಕೈಗಾರಿಕಾ ಸುರಕ್ಷತೆ ಬಗ್ಗೆ ಜಾಗೃತಿ ಹೊಂದಬೇಕು. ಪ್ರತಿ ಕೈಗಾರಿಕೆಗಳಲ್ಲಿ ಗುತ್ತಿಗೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ಕ್ಯಾಂಟೀನ್‌ಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ನಂಜನಗೂಡಿನ ಎ ಆ್ಯಂಡ್ ಎಸ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ಸಂತೋಷ್ ಗುಂಡಪೆ ಮಾತನಾಡಿ, ಸುರಕ್ಷತೆ ಎನ್ನುವುದು ಕೇವಲ ದಿನಾಚರಣೆಗೆ ಸೀಮಿತವಾಗಿರದೆ ಅದನ್ನು ನಾವು ಅನುಸರಿಸಬೇಕು ಎಂದರು.
ಎಂ.ಜೆ. ಸ್ಟೇಷನರಿಯ ಪ್ರೈ.ಲಿ. ವ್ಯವಸ್ಥಾಪಕಿ ಶಶಿರಂಜನ್ ಮಾತನಾಡಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಕುರಿತು ಅಗತ್ಯ ಸುರಕ್ಷತಾ ಕ್ರಮ ವಹಿಸಬೇಕು ಎಂದರು.
ಎಐಟಿಯುಸಿ ಮುಖಂಡ ಶೇಷಾದ್ರಿ ಮಾತನಾಡಿ, ಮಹಿಳಾ ಕಾರ್ಮಿಕರಿಗೆ ಸಾರಿಗೆ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು. ದೇಶದಲ್ಲಿ 1.72 ಕೋಟಿ ಅಸಂಘಟಿತ ಕಾರ್ಮಿಕರು ಇದ್ದಾರೆ. ಇವರಿಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ನಂಜನಗೂಡಿನ ಇಂಡಸ್ಟ್ರೀಯಲ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ.ಎಂ.ರಾಮಪ್ರಸಾದ್, ಡಾ. ಎನ್.ಮುತ್ತುಕುಮಾರ್ ಇತರರು ಇದ್ದರು.