ಜಿಲ್ಲೆ

ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣೆ

ವಿರಾಜಪೇಟೆ: ಕಟ್ಟಡ ಕಾರ್ಮಿಕ ಸಂಘದಿಂದ ಗುರುತಿನ ಚೀಟಿ ಪಡೆದ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ವಿರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ. ಮಾದಪ್ಪ ಹೇಳಿದರು.


ನಗರದ ಕಾರ್ಮಿಕ ನಿರೀಕ್ಷಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಡ ಕುಟುಂಬದ ಕಾರ್ಮಿಕರು ಸಂಘದ ಮೂಲಕ ಗುರುತಿನ ಚೀಟಿ ಪಡೆದುಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು. ಪೊನ್ನಂಪೇಟೆ ತಾಲೂಕಿನ ಗಾರೆ ಕೆಲಸದ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಟೂಲ್‌ಕಿಟ್ ವಿತರಿಸಲಾಗುವುದು ಎಂದರು.


ಕಾರ್ಮಿಕ ನಿರೀಕ್ಷಕರ ಕಚೇರಿಯ ಸಹಾಯಕ ಎಸ್. ನವಿನ್, ಕಟ್ಟಡ ಕಾರ್ಮಿಕ ಜಿಲ್ಲಾ ಸಂಘದ ಸಿ.ಜಿ. ವರ್ಗಿಸ್, ಎಂ. ಸೇದು ಹಾಗೂ ಕಾರ್ಮಿಕ ಸಂಘದ ಸದಸ್ಯರು ಹಾಜರಿದ್ದರು. 80 ಜನ ಗಾರೆ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.