ಕಲಬುರಗಿ: ಕಾರ್ಮಿಕರಿಗೆ ಕಾಯ್ದೆ, ಕಾನೂನು ತುಂಬಾ ಅವಶ್ಯಕವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆ ಹಾಗೂ ಯೋಜನೆಗಳು ಮತ್ತು ಬಡತನ ನಿರ್ಮೂಲನೆ ಪರಿಣಾಮಕಾರಿ ಅನುಷ್ಠಾನ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತ ಅಭಿವೃದ್ಧಿ ಆಗಬೇಕಾದರೆ ಇಂತಹ ಕೈಗಾರಿಕಾ ಕಾನೂನು, ಕಾಯ್ದೆಗಳು ಅವಶ್ಯಕ. ಕೈಗಾರಿಕೆ ಕಾನೂನು ಜಾರಿಗೆ ತರುವುದರ ಜತೆಗೆ ಸಮರ್ಪಕ ಅನುಷ್ಠಾನದ ಬಗ್ಗೆಯೂ ಕಾಳಜಿ ವಹಿಸಬೇಕು. ಕೇವಲ ಕಾಗದದಲ್ಲಿ ಉಳಿದರೆ ದೇಶದ ಅಭಿವೃದ್ಧಿ ನಿರೀಕ್ಷಿಸಲು ಆಗದು ಎಂದು ಅಭಿಪ್ರಾಯಪಟ್ಟರು.
ಹೊಸ- ಹೊಸ ಕಾನೂನು, ಯೋಜನೆಗಳ ಬಗ್ಗೆ ತಿಳಿದುಕೊಂಡರೆ ರಾಷ್ಟç ನಿರ್ಮಾಣ ಕಾರ್ಯಕ್ಕೆ ನಾವು ಕೊಡುಗೆ ನೀಡಬಹುದು. ಬದಲಾದ ಸನ್ನಿವೇಶದಲ್ಲಿ ಹೊಸ- ಹೊಸ ಕಾನೂನು, ಕಾಯ್ದೆಗಳು ಬರುತ್ತವೆ. ಅವುಗಳ ಕುರಿತು ಸಮರ್ಪಕ ಮಾಹಿತಿ ಹೊಂದದಿದ್ದಲ್ಲಿ ಪ್ರತಿ ಹಂತದಲ್ಲಿ ವಿಫಲರಾಗುತ್ತೇವೆ. ಹೀಗಾಗಿ ಎಲ್ಲರೂ ಕಾನೂನುಗಳಲ್ಲು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ್ ಬಷೀರ್ ಅನ್ಸಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಇದ್ದ ಕಾನೂನುಗಳನ್ನು ನವೀಕರಣ ಮಾಡಲಾಗುತ್ತಿದೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಕಾರ್ಮಿಕರಿಗೆ ಕಾನೂನು ಮಾಹಿತಿ ಅವಶ್ಯಕ ಎಂದರು.
ಎನ್‌ಸಿಎಲ್ ಅಧ್ಯಕ್ಷ ಶಂಕರ ಕಟ್ಟಿಸಂಗಾವಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಮಾತನಾಡಿದರು. ಇನ್‌ಬ್ರಿವ್ ಯುನಿಟ್ ಎಚ್‌ಆರ್ ಅಜಯ ಚವ್ಹಾಣ್, ಕೆಕೆಐಸಿಸಿ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಸ್ವರ್ಣಕಾರ ಸಂಘದ ಅಧ್ಯಕ್ಷ ಅರವಿಂದ ಪೋದ್ದಾರ್ ಇತರರಿದ್ದರು.
ಕಲಬುರಗಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಸ್ವಾಗತಿಸಿದರು. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ನಿರೂಪಣೆ ಮಾಡಿದರು.