ಬೆಳಗಾವಿ: ಇಲ್ಲಿನ ಉದ್ಯಮಬಾಗದಲ್ಲಿ ಆಸ್ಪತ್ರೆ ಆರಂಭಿಸುವಂತೆ ಕೆಎಲ್‌ಇ ಆಡಳಿತ ಮಂಡಳಿಗೆ ಮನವಿ ಮಾಡಿದ ಮೂರೇ ತಿಂಗಳಲ್ಲಿ ಆಸ್ಪತ್ರೆ ಸಿದ್ಧಗೊಂಡು ಇಂದು ಲೋಕಾರ್ಪಣೆಗೊಂಡಿರುವುದು ಕೆಎಲ್‌ಇ ಸಂಸ್ಥೆಯ ಸೇವಾ ಬದ್ಧತೆಗೆ ಸಾಕ್ಷಿ ಎಂದು ಬೆಳಗಾಂ ಫೌಂಡ್ರಿ ಕ್ಲಸ್ಟರ್ ಚೇರ್ಮನ್ ರಾಮ ಬಂಢಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಉದ್ಯಮಬಾಗದಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಶೇಷಗಿರಿ ಕಾಲೇಜು ಆವರಣದಲ್ಲಿ ನೂತನವಾಗಿ ಆರಂಭಿಸುತ್ತಿರುವ ‘ಕೆಎಲ್‌ಇ ವೆಲ್‌ನೆಸ್ ಸೆಂಟರ್’ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿನ ಉದ್ಯಮಬಾಗದಲ್ಲಿನ ಸಾವಿರಾರು ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸಲು ಇಎಸ್‌ಐ ಆಸ್ಪತ್ರೆ ಆರಂಭಿಸುವಂತೆ ಕಳೆದ 5 ವರ್ಷಗಳಿಂದ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿರಲಿಲ್ಲ. ಆದರೆ, ಕೆಎಲ್‌ಇ ಆರೋಗ್ಯ ಸೇವೆಯಲ್ಲಿ ತ್ವರಿತವಾಗಿ ಸ್ಪಂದಿಸಿರುವುದು ಸಾವಿರಾರು ಕಾರ್ಮಿಕರು ಹಾಗೂ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದರು. ಯುಎಸ್‌ಎಂ-ಕೆಎಲ್‌ಇ ಅಂತಾರಾಷ್ಟ್ರೀಯ ವೈದ್ಯಕೀಯ ಯೋಜನೆಯ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಮಾತನಾಡಿ, ಉದ್ಯಮಬಾಗದಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಈವರೆಗೂ ಇಲ್ಲಿ ಯಾವುದೇ ಆಸ್ಪತ್ರೆಗಳಿಲ್ಲದೆ ಕಾರ್ಮಿಕರು ತುರ್ತು ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಪಡೆಯಲು ದೂರದ ಅಸ್ಪತ್ರೆಗೆ ತೆರಳಿ ತೊಂದರೆ ಅನುಭವಿಸುವಂತಾಗಿತ್ತು. ಈ ವಿಷಯವನ್ನು ಉದ್ಯಮಿಗಳು ನಮ್ಮ ಗಮನಕ್ಕೆ ತಂದು ಅನುಕೂಲ ಮಾಡುವಂತೆ ಜನವರಿಯಲ್ಲಿ ಚರ್ಚಿಸಿದ್ದರು. ಉದ್ಯಮಿಗಳ ಮನವಿಯನ್ನು ನಮ್ಮ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ತಿಳಿಸಿದಾಗ ಕೂಡಲೇ ಕಾರ್ಯಪ್ರವೃತ್ತರಾಗಲು ಸೂಚಿಸಿದ್ದರು. ಇದು ಕೋರೆ ಅವರ ಸೇವಾ ಮನೋಭಾವ ಪ್ರತಿನಿಧಿಸುತ್ತದೆ ಎಂದರು.
ಸಾವಿರಾರು ಕಾರ್ಮಿಕರ ಜತೆಗೆ ಅನಗೋಳದ ಜನತೆಗೂ ಈ ಆಸ್ಪತ್ರೆಯಿಂದ ವೈದ್ಯಕೀಯ ಸೇವೆ ಲಭಿಸಲಿದ್ದು, ಇದರ ಲಾಭ ಹೆಚ್ಚಿನ ಜನತೆಗೆ ತಲುಪಿಸಿ ಮುಂದುವರಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಉದ್ಯಮಿಗಳಿಗಿದೆ. ಅದಕ್ಕೆ ಅಗತ್ಯ ಸೇವೆಗಳನ್ನು ಒದಗಿಸುವ ಹೊಣೆಯಾಗಿದ್ದು, ನಮ್ಮ ವೈದ್ಯಕೀಯ ತಂಡ ಉತ್ಸುಕವಾಗಿದೆ ಎಂದು ಹೇಳಿದರು. ಸಣ್ಣ ಕೈಗಾರಿಕಾ ಉದ್ಯಮಿಗಳ ಅಸೋಸಿಯೇಷನ್ ಅಧ್ಯಕ್ಷ ಮಹದೇವ ಚೌಗಲೆ, ಚೇಂಬರ್ ಅಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಜ್ ಅಧ್ಯಕ್ಷ ಹೇಮೇಂದ್ರ ಪೋರವಾಲ, ಲಘು ಉದ್ಯಮಭಾರತಿಯ ಅಧ್ಯಕ್ಷ ದಯಾನಂದ ನೇತಲಕರ್, ಅಶೋಕ ಐರನ್ ವರ್ಕ್ಸ್ ಅಧ್ಯಕ್ಷ ಜಯಂತ ಹುಂಬಾರವಾಡಿ, ಕೆಎಲ್‌ಇ ಕ್ಲಿನಿಕಲ್ ಸರ್ವಿಸ್ ನಿರ್ದೇಶಕ ಡಾ.ಎಸ್.ಸಿ.ಧಾರವಾಡ, ಹೋಹನ್ ಜುವಳಿ ಸೇರಿದಂತೆ ಇತರರು ಇದ್ದರು.