ಮೈಸೂರು: ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಅನ್ಯರು ಕಾರ್ಮಿಕರ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರಾಜ್ಯ ಭಾರತ ಮಾತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಕಾರ್ಡ್ ನೀಡುತ್ತಿದೆ. ಆದರೆ, ಇದು ಅನ್ಯರ ಪಾಲಾಗುತ್ತಿದೆ. ಒಂದು ಸಾವಿರ ರೂ.ಗೆ ಕಾರ್ಮಿಕರೇತರಿಗೂ ಕಾರ್ಡ್ ಮಾಡಿಸಿಕೊಡಲಾಗುತ್ತಿದೆ. ಇದಕ್ಕಾಗಿ ದಲ್ಲಾಳಿಗಳು ಸೃಷ್ಟಿಯಾಗಿದ್ದಾರೆ. ಇವರು ಕಾರ್ಮಿಕರ ಸೌಲಭ್ಯ ಕಬಳಿಸುತ್ತಿದ್ದಾರೆ. ಇಲ್ಲವೇ ಇತರರಿಗೆ ವರ್ಗಾವಣೆ ಆಗುವಂತೆ ಮಾಡುತ್ತಿದ್ದು, ಇದರಿಂದ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಜಿ.ಸಿದ್ದರಾಜು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸೌಲಭ್ಯ ಪಡೆಯಲು ಆನ್‌ಲೈನ್ ವ್ಯವಸ್ಥೆ ಜಾರಿಯಾದ ಬಳಿಕ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಬೋಗಸ್ ಕಾರ್ಡ್‌ಗಳ ಸಂಖ್ಯೆಯೂ ಅಧಿಕವಾಗಿದೆ. ಆದ್ದರಿಂದ ಆನ್‌ಲೈನ್ ಪದ್ಧತಿಯನ್ನು ರದ್ದುಪಡಿಸಿ, ಈ ಹಿಂದಿನಂತೆ ಭೌತಿಕವಾಗಿ ಅರ್ಜಿ ನಮೂನೆ ಸ್ವೀಕರಿಸುವ ಆಫ್‌ಲೈನ್ ಪದ್ಧತಿ ಜಾರಿ ಮಾಡಬೇಕು. ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಮಕ್ಕಳ ಮದುವೆಗಾಗಿ 50 ಸಾವಿರ ರೂ. ಸಹಾಯ ಧನ ವಿತರಣೆಯಲ್ಲಿ ಲೋಪವಾಗುತ್ತಿದೆ. ಯಾವುದೇ ಕಾರಣಕ್ಕೂ ಅವರ ಮಗ, ಪುತ್ರಿ, ಸೊಸೆ ಹೆಸರಿಗೆ ಹಣ ನೀಡಬಾರದು. ಇದರಿಂದ ಕಾರ್ಮಿಕರ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ನೇರ ಫಲಾನುಭವಿಯಾದ ಕಾರ್ಮಿಕನ ಖಾತೆಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಮಕ್ಕಳಿಗೆ ಕಾರ್ಮಿಕರ ಇಲಾಖೆಯಿಂದ ವಿದ್ಯಾರ್ಥಿವೇತನ ನೀಡಬೇಕು. ಆದರೆ, ಈ ಹೊಣೆಗಾರಿಕೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಬಾರದು. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.