ಕಲಬುರಗಿ: ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನ ಏಕಾಏಕಿ ಶೇ.೭೫ರಷ್ಟು ಕಡಿಮೆ ಮಾಡಿದ ನಿರ್ಧಾರ ಕೈಬಿಡಬೇಕು, ಹೊಸ ಸಾಫ್ಟವೇರ್ ನೆಪದಲ್ಲಿ ವಿವಿಧ ಯೋಜನೆಗಳ ಅರ್ಜಿ ಸ್ವೀಕರಿಸುತ್ತಿಲ್ಲ. ಅದನ್ನು ಕೂಡಲೇ ಬಗೆಹರಿಸಬೇಕು, ಇಲ್ಲವೇ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಬೇಕು ಎಂದು ಕೆಎಸ್‌ಸಿಡಬ್ಲೂಸಿಯು ಮುಖಂಡ ಶಂಕರ ಕಟ್ಟಿ ಸಂಗಾವಿ ಆಗ್ರಹಿಸಿದರು.
ಶೈಕ್ಷಣಿಕ ಸಹಾಧನ ಕೇವಲ ೧,೧೦೦ಕ್ಕೆ ಇಳಿಸಿದ್ದು, ಎಂಬಿಬಿಎಸ್, ಇಂಜಿನಿಯರ್ ಪದವಿಗಳಿಗೆ 10 ಸಾವಿರ ರೂ.ಕ್ಕೆ ಇಳಿಸಲಾಗಿದೆ. ಇಷ್ಟು ಕಡಿಮೆ ದುಡ್ಡಲ್ಲಿ ಬಡ ಕಾರ್ಮಿಕರ ಮಕ್ಕಳು ಶಿಕ್ಷಣ ಹೇಗೆ ಕಲಿಯಬೇಕು. ಅದನ್ನು ಕೂಡಲೇ ಮೊದಲಿನಂತೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ, ಮುಖ್ಯಸ್ಥ ಸಭೆ ನಡೆಸಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಬರಬೇಕಾದ ಸುಂಕದ ಮೊತ್ತ ವಸೂಲಿ ಮಾಡಬೇಕು, ನವೀಕರಣ ಅರ್ಜಿಗಳಿಗೆ ಸದಸ್ಯತ್ವ ಅವಧಿ ಮೊದಲಿನ ರೀತಿ ಮೂರು ವರ್ಷ ನಿಗದಿ ಮಾಡಬೇಕು, ನಿವೃತ್ತಿ ಪಿಂಚಣಿ ಅರ್ಜಿ ಸಲ್ಲಿಕೆ ಕಾಲಮಿತಿ ತೆಗೆದು ಹಾಕಬೇಕು ಎಂದು ತಿಳಿಸಿದರು.
ಹಿಂದಿನ ಸರ್ಕಾರದಲ್ಲಿ ನಡೆದ ಕಿಟ್ ಹಗರಣ ಸೇರಿ ವಿವಿಧ ಖರೀದಿಯಲ್ಲಿನ ಅವ್ಯವಹಾರಗಳು ತನಿಖೆ ನಡೆಸಬೇಕು, ಆರು ತಿಂಗಳಾದರೂ ತನಿಖೆ ನಡೆಸದೇ ಹಿಂದಿನ ಸರ್ಕಾರದಂತೆ ನಡೆಯುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾರ್ಮಿಕರ ನೋಂದಣಿ, ನವೀಕರಣ ಅರ್ಜಿ ಶುಲ್ಕ ನಿಗದಿಪಡಿಸಬೇಕು, ಪ್ರತಿ ಗ್ರಾಪಂನಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ ಕಾರ್ಮಿಕನಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಸ್ಥಳೀಯವಾಗಿ ಉದ್ಯೋಗ ನೀಡಬೇಕು. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಭವಿಷ್ಯದಲ್ಲಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು, ಲೋಕಸಭೆ ಚುನಾವಣೆಯಲ್ಲಿ ಕಾರ್ಮಿಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಹಣಮಂತರಾಯ ಪೂಜಾರಿ, ಶಿವಲಿಂಗ ಹಾವನೂರ, ಮಲ್ಲಿಕಾರ್ಜುನ ಮಾಳಗೆ, ಸಂಜುಕುಮಾರ ಗುತ್ತೇದಾರ, ಅಶೋಕ ರಾಠೋಡ್ ಇತರರಿದ್ದರು.