ಮೈಸೂರು: ಜೆ.ಕೆ.ಟಯರ್ ಕಂಪನಿಯಲ್ಲಿ ಕೆಲಸದಿಂದ ತೆಗೆದಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಜೆ.ಕೆ. ಟಯರ್ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
255 ಕಾರ್ಮಿಕರಿಂದ ಮುಚ್ಚಳಿಕೆ ಬರೆಸಿಕೊಂಡು ಮರು ನೇಮಕಾತಿ ಮಾಡಿಕೊಳ್ಳಲಾಗಿದೆ. 130 ಕಾರ್ಮಿಕರಿಗೆ ಈ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಇವರೆಲ್ಲರೂ ಕಾರ್ಮಿಕ ಸಂಘಟನೆಯಲ್ಲಿ ಭಾಗಿಯಾದ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಇಂದಿರೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸುಮಾರು 5 ವರ್ಷ ಕಾನೂನು ಹೋರಾಟ ಮಾಡಿ ನ್ಯಾಯಾಲಯದ ಆದೇಶದಂತೆ ಮತ್ತೆ ನಿಯುಕ್ತಿಗೊಂಡ ಬದಲಿ ಕೆಲಸಗಾರರನ್ನು ಶೋಷಿಸಲಾಗುತ್ತಿದೆ.
ಕಾರ್ಮಿಕ ಸಂಘಟನೆ ರಚಿಸಿದ ಒಂದೇ ಕಾರಣಕ್ಕೆ ಸಮಾಲೋಚನೆ ಹೆಸರಿನಲ್ಲಿ ಕೆಲಸದಿಂದ ತೆಗೆಯಲಾಗಿತ್ತು. ಕಾರ್ಮಿಕ ನ್ಯಾಯಾಲಯ ಇದು ಕಾನೂನು ಬಾಹಿರ ಎಂದು ತಿಳಿಸಿದ ನಂತರ ಮತ್ತೆ ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಆದರೆ, ಈ ಬದಲಿ ಕಾರ್ಮಿಕರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇವರಿಗೆ ದೈಹಿಕ ಸಾಮರ್ಥ್ಯ ಮೀರಿದ ಕೆಲಸ ನೀಡಲಾಗುತ್ತಿದೆ. 50 ವರ್ಷ ಮೇಲ್ಪಟ್ಟವರಿಗೂ ಸುಮಾರು 50 ರಿಂದ 60 ಕೆಜಿ ತೂಕದ ಟಯರ್‌ಗಳನ್ನು ನಾಲ್ಕು ಅಡಿಗೂ ಹೆಚ್ಚು ಎತ್ತರದವರೆಗೆ ಎತ್ತುವಂತಹ ಕೆಲಸ ನೀಡಲಾಗುತ್ತಿದೆ.
ಇವರು ತಾವಾಗಿಯೇ ಕೆಲಸ ಬಿಟ್ಟು ಹೋಗಲೆಂಬ ಹುನ್ನಾರ ಇದಾಗಿದೆ. ಹೀಗಾಗಿ ಈ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಕಾರ್ಮಿಕ ಇಲಾಖೆ, ಕಾರ್ಮಿಕ ನ್ಯಾಯಾಲಯದ ಮತ್ತು ಮಾನವ ಹಕ್ಕು ಆಯೋಗ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.