ಜಿಲ್ಲೆ

ಕಾರ್ಮಿಕರ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ

ಚಾಮರಾಜನಗರ: ಮರಳೇಕಾಯಿ ತಿಂದು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ವಲಸೆ ಕಾರ್ಮಿಕರ ಮಕ್ಕಳು ಚೇತರಿಕೆ ಕಂಡಿದ್ದಾರೆ.

ಯಳಂದೂರು ಭಾಗದಲ್ಲಿ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದಿಂದ ಬಂದಿದ್ದ ಕೂಲಿ ಕಾರ್ಮಿಕರ ಮಕ್ಕಳು ಭಾನುವಾರ ಮರಳೇಕಾಯಿ ತಿಂದು ಅಸ್ವಸ್ಥರಾಗಿದ್ದರು. ಇವರಲ್ಲಿ 12 ಮಕ್ಕಳನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ಮಕ್ಕಳ ಆರೋಗ್ಯ ಚೇತರಿಕೆ ಕಂಡಿದೆ. ಪ್ರಾಣಾಪಾಯವಿಲ್ಲ ಎಂದು ಆರ್‌ಎಂಒ ಡಾ.ಮಹೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಅಧಿಕಾರಿಗಳು ಭೇಟಿ: ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಪಾಲಕರಿಗೆ ವಲಸೆ ಕಾರ್ಡ್‌ಗಳನ್ನು ನೀಡಲಾಗಿದ್ದು, ಮಕ್ಕಳನ್ನು ಶಾಲೆ ಹಾಗೂ ಅಂಗನವಾಡಿಗಳಿಗೆ ದಾಖಲಿಸುವಂತೆ ಅರಿವು ಮೂಡಿಸಿದರು. ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕರು, ಆರೋಗ್ಯಾಧಿಕಾರಿಗಳು ಇತರರು ಇದ್ದರು.

ಆರೋಗ್ಯ ವಿಚಾರಣೆ: ಎಸ್‌ಡಿಪಿಐ ಮುಖಂಡರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಮಾತನಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆದರಲ್ಲದೆ, ಮಕ್ಕಳ ಪಾಲಕರಿಗೆ ಧೈರ್ಯ ಹೇಳಿದರು. ಸಹಾಯದ ಅವಶ್ಯಕತೆ ಇದ್ದರೆ ಸಂಪರ್ಕಿಸಲು ತಿಳಿಸಿದರು. ನಗರಸಭೆ ಸದಸ್ಯ ಕಲೀಲ್‌ವುಲ್ಲಾ, ಉಪಾಧ್ಯಕ್ಷ ಸಿ.ಕೆ.ನಯಾಜುಲ್ಲ, ಪ್ರಧಾನ ಕಾರ್ಯದರ್ಶಿ ಮತ್ತು ನಗರಸಭೆ ಸದಸ್ಯ ಎಂ.ಮಹೇಶ್, ಜಿಲ್ಲಾ ಸಮಿತಿ ಸದಸ್ಯ ಮಹಮದ್ ಉಮರ್, ಟೌನ್ ಕಾರ್ಯದರ್ಶಿ ಮಹಮದ್ ತೌಸ್ಿ, ಮುಖಂಡ ಅಬೂಬರ್ ಸಿದ್ದಿಕ್ ಇದ್ದರು.