ಜಿಲ್ಲೆ

ಕಾರ್ಮಿಕರ ಪರಿಶ್ರಮದಿಂದ ಭವ್ಯ ಭಾರತ ನಿರ್ಮಾಣ: ಬಿ.ವೈ.ರಾಘವೇಂದ್ರ

ಶಿಕಾರಿಪುರ: ಕಾರ್ಮಿಕರ ಪರಿಶ್ರಮದಿಂದ ನಾವು ಭವ್ಯ ಭಾರತ ನಿರ್ಮಾಣ ಮಾಡಿದ್ದೇವೆ. ಕಾರ್ಮಿಕರು ನಮ್ಮ ದೇಶದ ಆಸ್ತಿ. ಅವರ ಸುಕ್ಷೇಮ ಬದುಕು ನಮ್ಮ ಜವಾಬ್ದಾರಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶನಿವಾರ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರು ಸರ್ಕಾರದ ಸವಲತ್ತುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಯ ಸಮಯದಲ್ಲಿ ಕಾರ್ಮಿಕ ವರ್ಗದವರಿಗೆ ವಿಶೇಷವಾಗಿ ಧನಸಹಾಯವನ್ನು ಬಿಜೆಪಿ ಸರ್ಕಾರದಿಂದ ಮಾಡಲಾಗಿದೆ. ಶೈಕ್ಷಣಿಕ, ಮದುವೆ, ವೈದ್ಯಕೀಯ, ಹೆರಿಗೆಗೆ ನೆರವು ಒದಗಿಸಲಾಗಿದೆ. ಪಡಿತರ, ಟೂಲ್ ಕಿಟ್, ಇಮ್ಯೂನಿಟಿ ಕಿಟ್ ವಿತರಿಸಲಾಗಿದೆ ಎಂದರು.

ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ. ಕೆಲವು ಕಾರ್ಮಿಕರು ಅಪಾಯದಲ್ಲಿ ಕೆಲಸ ಮಾಡುತ್ತಾರೆ. ಸೂಕ್ತವಾದ ಉಡುಪು, ಸಲಕರಣೆಗಳನ್ನು ಉಪಯೋಗಿಸಿ ಜಾಗ್ರತೆಯಿಂದ ಕೆಲಸ ಮಾಡಿ. ನಿಮ್ಮ ಆರೋಗ್ಯವನ್ನು ಉಪೇಕ್ಷೆ ಮಾಡಬೇಡಿ. ನಿಮ್ಮನ್ನು ನಂಬಿ ಇಡೀ ಕುಟುಂಬ ಇರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ ಎಂದರು.