ಮೈಸೂರು: ಕಾರ್ಮಿಕ ಕಲ್ಯಾಣ ಮಂಡಳಿಯ ಹಣದಲ್ಲಿ ಬಸ್ ಪಾಸ್ ವಿತರಣೆಗೆ ವಿರೋಧಿಸಿ ರಾಜ್ಯ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘಟನೆ (ಎಐಟಿಯುಸಿ ಸಂಯೋಜಿತ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇರುವ ಶ್ರಮಜೀವಿ ಕಟ್ಟಡ ಕಾರ್ಮಿಕರ ದುಡಿಮೆಯಿಂದ ಸಂಗ್ರಹಿಸಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಅಧೀನದಲ್ಲಿ ಬರುವ ವಿವಿಧ ವಸತಿ ಯೋಜನೆಗಳಲ್ಲಿ ವಿಶೇಷವಾಗಿ ಕೊಳಚೆ ನಿರ್ಮೂಲನಾ ಮಂಡಳಿ ಮುಖಾಂತರ ಈ ಹಣವನ್ನು ಅನ್ಯ ಉದ್ದೇಶ ಬಳಸಿಕೊಳ್ಳುವ ಮೂಲಕ ಹಣಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಣದಲ್ಲಿ ಸಾರಿಗೆ ಇಲಾಖೆಯ ಬಸ್ ಪಾಸ್‌ಅನ್ನು ಉಚಿತವಾಗಿ ನೀಡುತ್ತೇವೆಂದು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿ ತಿಂಗಳ ಬಸ್ ಪಾಸ್‌ಗೆ 1400 ರೂ. ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಎಷ್ಟೋ ಹಳ್ಳಿಗಳಿಗೆ ಬಸ್‌ಗಳ ಸಂಚಾರವೇ ಇಲ್ಲ. ಕಾರ್ಮಿಕರಿಗೆ ಬಸ್ ಪಾಸ್ ನೀಡಿದರೆ ಏನು ಪ್ರಯೋಜನವಿಲ್ಲ. ಯಾವುದೇ ಕಟ್ಟಡ ಕಾರ್ಮಿಕ ಬಸ್‌ನಲ್ಲಿ ಹೋಗಿ ಕೆಲಸ ಮಾಡುವುದು ಕಷ್ಟಕರ. ಇಂತಹ ಅವಿವೇಕದ ತೀರ್ಮಾನವನ್ನು ಹಿಂಪಡೆಯಬೇಕು. ಬದಲಿಗೆ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಇಎಸ್‌ಐ ಸೌಲಭ್ಯ, ಮದುವೆಗಾಗಿ 1 ಲಕ್ಷ ರೂ. ಸಹಾಯಧನ, ನಿವೃತ್ತ ವೇತನಕ್ಕೆ 10 ಸಾವಿರ ರೂ. ನೀಡಬೇಕು. ಸ್ವಾಭಾವಿಕ ಸಾವಿಗೆ 5 ಲಕ್ಷ ರೂ., ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಗೆ 2019-20ನೇ ಸಾಲಿನಲ್ಲಿ 5,129 ಫಲಾನುಭವಿಗಳಿಗೆ 76 ಕೋಟಿ ರೂ. ಮಂಜೂರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಖರ್ಚಿನ ವಿವರವನ್ನು ಮಂಡಳಿಯು ಈವರೆಗೂ ನೀಡಿಲ್ಲ. ಮತ್ತೆ 2021-22ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಗೆ 433 ಕೋಟಿ ರೂ. ಮಂಜೂರು ಮಾಡಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ ಬೇಕೆಂದು ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನಿಯಮಾನುಸಾರ 2 ಲಕ್ಷ ರೂ. ಮಂಜೂರು ಮಾಡಬೇಕು. ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಅಥವಾ ಇಎಸ್‌ಐ ನಗದುರಹಿತ ಸೇವೆ ಜಾರಿಗೊಳಿಸಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ರೇವಣ್ಣ, ಸೋಮರಾಜೇ ಅರಸ್, ಶಿವಣ್ಣ, ಮುಜಾಹಿದ್ ಪಾಷಾ, ಶಿವರಾಮು, ಹೊನ್ನೇಶ್, ಅಬ್ದುಲ್ ನಭಿ, ಮಹದೇವು, ರಾಮಸ್ವಾಮಿ, ನಿಂಗಣ್ಣಸ್ವಾಮಿ, ಕಾಳಸ್ವಾಮಿ, ಜಾನ್‌ಪ್ರಭಾಕರ್, ದೇವರಾಜು, ನಯಾಜ್ ಪಾಷಾ, ಷಬೀರ್, ನಂಜನಾಯಕ, ಕಾಂತರಾಜು, ರಂಗಸ್ವಾಮಿ, ಮಹದೇವನಾಯಕ, ಸಿದ್ದರಾಜು, ಮಹೇಶ್ ಇನ್ನಿತರರು ಇದ್ದರು.