ಜಿಲ್ಲೆ

ಕಾರ್ಮಿಕರ ಕಾನೂನು ತಿದ್ದುಪಡಿ ವಿರೋಧಿಸಿ ಜುಲೈ 9ಕ್ಕೆ ದೇಶಾದ್ಯಂತ ಸಾರ್ವತ್ರಿಕ ಮುಷ್ಕರ

ಮೈಸೂರು: ಕೇಂದ್ರ ಸರ್ಕಾರ ಬಂಡವಾಳಗಾರರ ಪರವಾಗಿ ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡಿದೆ. ಇದರಿಂದಾಗಿ ಕಾರ್ಖಾನೆಗಳು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿವೆ.

ಹೀಗಾಗಿ ಇದನ್ನು ವಿರೋಧಿಸಿ ಹಾಗೂ ಕಾರ್ಮಿಕ, ರೈತ ಪರ ಧೋರಣೆ ಅನುಸರಿಸಬೇಕೆಂದು ಆಗ್ರಹಿಸಿ ಜು.9ರಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ ಎಂದು ಎಐಟಿಯುಸಿ ಕಾರ್ಮಿಕ ಸಂಘಟನೆ ಮುಖಂಡ ಎನ್.ಕೆ.ದೇವದಾಸ್ ತಿಳಿಸಿದರು.

8 ಗಂಟೆಯ ಕೆಲಸ ಅವಧಿಯನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಬೇಕು. ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಬಾರದು.

ಇಂದಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಂ ನೌಕರರಿಗೆ ರಾಷ್ಟ್ರವ್ಯಾಪಿ 26 ಸಾವಿರ ರೂ., ರಾಜ್ಯವ್ಯಾಪಿ 36 ಸಾವಿರ ರೂ. ಕನಿಷ್ಠ ವೇತನ ನಿಗದಿ ಪಡಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಅಂದು ಬೆಳಗ್ಗೆ 10ಕ್ಕೆ ನಗರದ ಗಾಂಧಿ ಚೌಕದಲ್ಲಿ ಕಾರ್ಮಿಕರು, ರೈತರು ಜಮಾವಣೆಗೊಂಡು ಕೆ.ಟಿ.ಸ್ಟ್ರೀಟ್, ಇರ್ವಿನ್ ರಸ್ತೆ, ಮಕ್ಕಾಜಿ ಚೌಕದ ಮೂಲಕ ಗಾಂಧಿ ಚೌಕಕ್ಕೆ ಬಂದು ಸೇರಲಿದ್ದಾರೆ. ಇಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಮೊದಲಾದವರಿಗೆ ಮಾಸಿಕ ಕನಿಷ್ಠ 9 ಸಾವಿರ ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ವಿವಿಧ ಕಾರ್ಮಿಕ ಸಂಘಟನೆ ಮುಖಂಡರಾದ ಚಂದ್ರಶೇಖರ ಮೇಟಿ, ಎನ್.ಕೆ.ಬಾಲಾಜಿರಾವ್, ಎಚ್.ಎಂ. ಬಸವರಾಜು, ಸೋಮರಾಜ ಅರಸ್, ಯಶೋದರ್ ಇದ್ದರು.