ತರೀಕೆರೆ: ಅನರ್ಹರಿಗೆ ನಿಯಮಬಾಹಿರವಾಗಿ ಕಾರ್ಮಿಕರ ಕಾರ್ಡ್ ವಿತರಿಸಲಾಗಿದೆ ಎಂದು ಕೆಡಿಪಿ ಸದಸ್ಯರು ಆರೋಪಿಸಿದರು.
ತಾಲೂಕು ಪಂಚಾಯಿತಿಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಜ್ಜಂಪುರ ಹಾಗೂ ತರೀಕೆರೆ ತಾಲೂಕುಗಳ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಹಲವು ಲೋಪಗಳ ಕುರಿತು ಪ್ರಸ್ತಾಪಿಸಿ, ಅನರ್ಹರಿಗೆ ನೀಡಿರುವ ಕಾರ್ಮಿಕರ ಕಾರ್ಡುಗಳನ್ನು ಪಟ್ಟಿ ಮಾಡಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಸಮಸ್ಯೆ ಆಲಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಹಗರಣಗಳಾಗುತ್ತಿವೆ. ಕಾರ್ಮಿಕ ನಿರೀಕ್ಷಕರ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಹಣ ಕೊಟ್ಟರೆ ಕಟ್ಟಡ ಕಾರ್ಮಿಕರಲ್ಲದವರಿಗೂ ಲೇಬರ್ ಕಾರ್ಡ್ ಕೊಟ್ಟು ಎಲ್ಲ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಸೌಲಭ್ಯ ಸಿಗದೆ ಅಲೆದಾಡುತ್ತಿದ್ದಾರೆ ಎಂದು ಕಾರ್ಮಿಕ ಇಲಾಖೆ ನಿರೀಕ್ಷಕ ಮಹದೇವಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಲಿಂಗದಹಳ್ಳಿ ಹೋಬಳಿಯ ಕಲ್ಲಾಳು, ಸಹ್ಯಾದ್ರಿಪುರ ಗ್ರಾಮಗಳಲ್ಲಿ ನಿವೇಶನ ರಹಿತ 600 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಸರ್ವೇ ನಂಬರ್ ಅದಲು ಬದಲಾಗಿರುವ ಕಾರಣ ಪುನಃ ಸರ್ವೇ ನಡೆಸಬೇಕು. ಈ ಬಗ್ಗೆ ಕಂದಾಯ, ಸರ್ವೇ, ಅರಣ್ಯ ಇಲಾಖೆಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸುವ ಮೂಲಕ ಜನರಿಗೆ 94ಸಿ ಅಡಿ ಹಕ್ಕುಪತ್ರ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಎಸಿ ಡಾ. ಕೆ.ಜೆ.ಕಾಂತರಾಜ್ ಹಾಗೂ ಆರ್‌ಎಫ್‌ಒ ಆಸೀಫ್ ಅಹಮದ್ ಅವರಿಗೆ ನಿರ್ದೇಶನ ನೀಡಿದರು.
ಪಟ್ಟಣ ಸೇರಿ ಹಲವು ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಕುಡಿಯುವ ನೀರಿನ ಪೈಪ್‌ಲೈನ್‌ಗಳ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್‌ಗೆ ಮೋಟಾರ್ ಜನರು ಅಳವಡಿಸುತ್ತಾರೆ ಎಂಬ ದೂರುಗಳಿವೆ. ಅಂಥವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೋಟಾರ್‌ಗಳನ್ನು ವಶಕ್ಕೆ ಪಡೆಯಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, 2030ಕ್ಕೆ ಕ್ಷಯಮುಕ್ತ ಘೋಷಣೆ ಮಾಡುವ ಗುರಿಯಿದೆ. ಅಜ್ಜಂಪುರ ತಾಲೂಕಿನ ಚಿಕ್ಕಾನವಂಗಲ ಗ್ರಾಪಂ, ಬಗ್ಗವಳ್ಳಿ ಗ್ರಾಪಂ ಮತ್ತು ತರೀಕೆರೆ ತಾಲೂಕಿನ ಮುಡುಗೋಡು ಗ್ರಾಪಂ, ಸಂತವೇರಿ ಗ್ರಾಪಂಗಳನ್ನು ಕ್ಷಯಮುಕ್ತ ಗ್ರಾಪಂಗಳೆಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ಸಭೆಯ ಹೊತ್ತಿಗೆ ಕೆಡಿಪಿ ಸದಸ್ಯರಿಗೆ ಸರ್ಕಾರದಿಂದ ನೀಡುವ ಭತ್ಯೆ ಕೊಡಿಸಿಕೊಡಬೇಕು ಎಂದು ಸದಸ್ಯ ಎಚ್.ಎನ್.ಮಂಜುನಾಥ್ ಅವರು ಶಾಸಕರಲ್ಲಿ ಮನವಿ ಮಾಡಿದರು. ಮತ್ತೋರ್ವ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಭತ್ಯೆಗಿಂತ ಜನರ ಸೇವೆ ಮಾಡುವುದೇ ಮುಖ್ಯ ಎಂದು ತಿರುಗೇಟು ನೀಡಿದರು.
ಹುಲಿತಿಮ್ಮಾಪುರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಅಪೂರ್ಣವಾಗಿರುವುದು ಮಾತ್ರವಲ್ಲ, ರೋಪ್‌ಲೈನ್, ಜೈಪುರ, ತಿಮ್ಮನಬೈಲು ಗ್ರಾಮಗಳಲ್ಲಿ ನಡೆದಿರುವ ಸಂಪೂರ್ಣ ಕಾಮಗಾರಿ ಕಳಪೆಯಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಆರೋಪಿಸಿದರು. ಯೋಜನೆಯ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದ್ದ ಕಿರಿಯ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿಯಲ್ಲಿ ಲೋಪವಾಗಿರುವುದು ಕಂಡುಬಂದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಜೈನುಲ್ಲಾಬ್ದೀನ್ ಪ್ರತಿಕ್ರಿಯಿಸಿ, ಕೂಡಲೇ ಸ್ಥಳ ಪರಿಶೀಲಿಸಿ ವರದಿ ನೀಡಲಾಗುವುದು ಎಂದು ತಿಳಿಸಿದರು.
ತೀವ್ರ ಬಿಸಿಲಿನ ಕಾರಣದಿಂದ ಕಸಬಾ ಮತ್ತು ಅಮೃತಾಪುರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಅಡಕೆ ತೋಟಗಳಲ್ಲಿ ಬಿಳಿ ಮತ್ತು ಕೆಂಪು ನುಸಿ ಬಾಧೆ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಸಭೆಗೆ ಮಾಹಿತಿ ನೀಡಿದರು.
ತಹಸೀಲ್ದಾರ್ ವಿನಾಯಕ, ತಾಪಂ ಇಒಗಳಾದ ಡಾ. ಆರ್.ದೇವೇಂದ್ರಪ್ಪ, ಡಾ. ಕೆ.ಎಂ.ವಿಜಯಕುಮಾರ್, ಜಿ.ಎಸ್.ರಚನಾ, ಗಂಗಾಧರ, ಮೆಹಬೂಬ್ ಇತರರಿದ್ದರು.