ಜಿಲ್ಲೆ

ಕಾರ್ಮಿಕ ವಿರೋಧಿ ನೀತಿ ಬಗ್ಗೆ ಜಾಗೃತರಾಗಿ: ಎಂ.ಎನ್. ಶ್ರೀರಾಮ್

ಮೈಸೂರು: ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕರು ಸದಾ ಜಾಗೃತವಾಗಿರಬೇಕು. ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಎನ್. ಶ್ರೀರಾಮ್ ಹೇಳಿದರು.

ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಯುಸಿಐ (ಸಿ) ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ಅವರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾರ್ಕ್ಸ್‌ವಾದವೇ ಕಾರ್ಮಿಕರ ಅಸ್ತ್ರವಾಗಬೇಕು. ಆಗ ಮಾತ್ರ ಕಾರ್ಮಿಕರು ಅನುಭವಿಸುತ್ತಿರುವ ಎಲ್ಲ ರೀತಿಯ ಶೋಷಣೆಯಿಂದ ಮುಕ್ತಗೊಳ್ಳಲು ಸಾಧ್ಯ. ವಿಶ್ವದ ಪ್ರತಿಯೊಬ್ಬ ಕಾರ್ಮಿಕ ಕೂಡ ಗೌರವಯುತ ಜೀವ ನಡೆಸಬೇಕು ಎಂದರು.

ಬಂಡವಾಳಶಾಹಿ ವ್ಯವಸ್ಥೆ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋಮುವಾದವನ್ನು ಮುನ್ನೆಲೆಗೆ ತರುತ್ತಿದೆ. ಸ್ವಾತಂತ್ರೃ ಲಭಿಸಿ 75 ವರ್ಷ ಕಳೆದರೂ ಕೋಮುವಾದ, ಬಡತನ, ಹಸಿವು, ನಿರುದ್ಯೋಗ, ಅತ್ಯಾಚಾರದಂತಹ ಮೂಲ ಸಮಸ್ಯೆಗಳು ಈಗಲೂ ತಾಂಡವವಾಡುತ್ತಿವೆ ಎಂದರು.

ಅಪ್ರತಿಮ ಮಾರ್ಕ್ಸ್‌ವಾದಿ ಶಿವದಾಸ್ ಘೋಷ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಗಾಂಧಿ ಕರೆ ನೀಡಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಬಳಿಕ ಅವರು ಎಸ್‌ಯುಸಿಐ ಪಕ್ಷವನ್ನು ಸ್ಥಾಪಿಸಿದರು ಎಂದು ಹೇಳಿದರು.

ಎಸ್‌ಯುಸಿಐಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಮಾತನಾಡಿ, ಭಾರತದಲ್ಲಿ ಇಂದಿಗೂ ಪ್ರಜಾಪ್ರಭುತ್ವದ ಮೌಲ್ಯ ಜಾರಿಯಾಗಿಲ್ಲ. ನಮ್ಮ ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರೃ, ಸಮಾನತೆ ಹಾಗೂ ಸಹೋದರತ್ವದ ಪರಿಕಲ್ಪನೆಯನ್ನು ಆಳುವ ವರ್ಗ ಕಸದ ಬುಟ್ಟಿಗೆ ಎಸೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ನೇತೃತ್ವದ ಹೋರಾಟವು ಕೇವಲ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರೃ ಚಳವಳಿಗೆ ಹೆಚ್ಚು ಆದ್ಯತೆ ನೀಡಿದ ಪರಿಣಾಮ ದೇಶದಲ್ಲಿ ಸಾಮಾಜಿಕ ಅಸಮಾನತೆ ಕೊನೆಗಾಣಲಿಲ್ಲ. ಉನ್ನತ ಸಾಂಸ್ಕೃತಿಕ ಚಳವಳಿ ನಡೆಯದ ಕಾರಣ ಊಳಿಗಮಾನ್ಯ ಮೌಲ್ಯ ಈಗಲೂ ಆಳವಾಗಿ ಬೇರೂರಿವೆ. ಜಾತಿ ಕಾರಣಕ್ಕೆ ಪ್ರೇಮಿಗಳನ್ನು ಮರ್ಯಾದೆ ಹತ್ಯೆ ಹೆಸರಿನಲ್ಲಿ ಕೊಲೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಡುಗಡೆ: ‘ಆಗಸ್ಟ್ 15ರ ಸ್ವಾತಂತ್ರೃ ಜನತೆಯ ವಿಮುಕ್ತಿ’, ‘ಭಾರತದಲ್ಲಿ ಸಾಂಸ್ಕೃತಿಕ ಚಳವಳಿ ಮತ್ತು ನಮ್ಮ ಕರ್ತವ್ಯಗಳು’, ‘ಚೀನಾದ ಸಾಂಸ್ಕೃತಿಕ ಕ್ರಾಂತಿ’ ಎಂಬ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಮುಖಂಡರಾದ ಕೆ.ಉಮಾದೇವಿ, ಚಂದ್ರಶೇಖರ್ ಮೇಟಿ ಹಾಗೂ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

ಸಿಟಿ ಫೋಟೋ ಫೋಲ್ಡರ್‌ನಲ್ಲಿ *18
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 3 ಪುಸ್ತಕಗಳನ್ನು ಎಸ್‌ಯುಸಿಐ(ಸಿ) ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಎನ್. ಶ್ರೀರಾಮ್ ಬಿಡುಗಡೆಗೊಳಿಸಿದರು. ಬಿ. ರವಿ, ಕೆ.ಉಮಾದೇವಿ, ಚಂದ್ರಶೇಖರ್ ಮೇಟಿ ಇದ್ದರು.