ಶೃಂಗೇರಿ: ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ಕಾರ್ಮಿಕ ಇಲಾಖೆ ಜಾರಿಗೊಳಿಸಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಬಸವರಾಜ್ ಕೌತಳ್ ತಿಳಿಸಿದರು.
ಸೋಮವಾರ ಕಾರ್ಮಿಕ ಮಿತ್ರ ಬಳಗ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಬಿಸಿಲು, ಮಳೆಯನ್ನು ಲೆಕ್ಕಿಸದೆ ನಿರಂತರ ಕೆಲಸ ಮಾಡುವ ಶ್ರಮಜೀವಿಗಳು. ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಕೊಂಡರೂ ನಿಜವಾದ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ನ್ಯಾಯ ದೊರಕಬೇಕಾದರೆ ಜಡ್ಡು ಕಟ್ಟಿದ ವ್ಯವಸ್ಥೆ ಬದಲಾಗಬೇಕಿದೆ. ಪೌರಕಾರ್ಮಿಕರು ಹಲವು ಕಡೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಭದ್ರತೆಯ ನೆರಳಿನಲ್ಲಿ ಬದುಕು ಕಟ್ಟಬೇಕು. ಇದಕ್ಕಾಗಿ ಕಾರ್ಮಿಕರ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಫಲಾನುಭವಿಗಳಿಗೆ ಸಸಿ ವಿತರಿಸಿ ಕೊಪ್ಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪರಿಸರ ಮಾಲಿನ್ಯದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ರಮೇಶ್ ಶೂನ್ಯ ಮಾತನಾಡಿ, ಕಾರ್ಮಿಕರು ಸಂಘಟಿತರಾಗಿ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಒಬ್ಬ ಕಾರ್ಮಿಕನಿಗೆ ಸಮಸ್ಯೆ ಉಂಟಾದಾಗ ಆತನಿಗೆ ಸಹಕಾರ ನೀಡಬೇಕು. ಆಗ ಮಾತ್ರ ಸಂಸ್ಥೆಯ ಮೂಲ ಉದ್ದೇಶಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದರು.
ಗುತ್ತಿಗೆದಾರ ಭಾನುಪ್ರಕಾಶ್ ಹಾಗೂ ಪಪಂ ಪೌರಕಾರ್ಮಿಕರಿಗೆ ಸನ್ಮಾನ, ಶಾಲಾಮಕ್ಕಳಿಗೆ ನೋಟ್‌ಬುಕ್ ಹಾಗೂ ಕಾರ್ಮಿಕರಿಗೆ ರಗ್ ವಿತರಿಸಲಾಯಿತು.
ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ಕೆ.ಎನ್.ವಿಠಲ್, ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘ ಅಧ್ಯಕ್ಷ ಭಾಸ್ಕರ್ ಪೂಜಾರಿ, ವಲಯ ಅರಣ್ಯಾಧಿಕಾರಿ ಮಧುಕರ್, ಉದ್ಯಮಿ ಕೆಎಸ್.ರಮೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಮಠದ ಸಿಬ್ಬಂದಿ ಸತೀಶ್ ಭಟ್ ಇದ್ದರು.